ನವದೆಹಲಿ: ಬುಧವಾರ ದೇಶದಲ್ಲಿ 3,016 ಹೊಸ ಕೋವಿಡ್ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಇದು ಕಳೆದ ಆರು ತಿಂಗಳಲ್ಲೇ ಅತಿ ಹೆಚ್ಚು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 13,509ಕ್ಕೆ ಏರಿಕೆಯಾಗಿದೆ. ಕಳೆದ ವರ್ಷದ ಅಕ್ಟೋಬರ್ 2 ರಂದು ಒಟ್ಟು 3,375 ಪ್ರಕರಣಗಳು ದಾಖಲಾಗಿದ್ದವು.
ದಿನದ ಪಾಸಿಟಿವಿಟಿ ದರ ಶೇ. 2.73 ರಷ್ಟಿದ್ದು, ವಾರದ ಪಾಸಿಟಿವಿಟಿ ದರ ಶೇ 1.71. ಕಳೆದೊಂದು ದಿನದಲ್ಲಿ ದೇಶಾದ್ಯಂತ ಕೋವಿಡ್ಗೆ ಒಟ್ಟು 14 ಜನ ಮೃತಪಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ ಮೂವರು, ಕೇರಳದಲ್ಲಿ ಎಂಟು, ಹಿಮಾಚಲ ಪ್ರದೇಶದಲ್ಲಿ ಒಂದು, ದೆಹಲಿಯಲ್ಲಿ ಎರಡು ಸಾವು ದಾಖಲಾಗಿದೆ. ಇಲ್ಲಿವರೆಗೆ ಮೃತಪಟ್ಟವರ ಒಟ್ಟು ಸಂಖ್ಯೆ 5,30,862.
ದೇಶಾದ್ಯಂತ ಈವರೆಗೆ ದಾಖಲಾದ ಕೋವಿಡ್ ಪ್ರಕರಣಗಳ ಸಂಖ್ಯೆ 4.47 ಕೋಟಿ (4,47,12,692). ರಾಷ್ಟ್ರೀಯ ಕೋವಿಡ್ ಚೇತರಿಕೆಯ ಪ್ರಮಾಣ ಶೇ 98.78 ಇದ್ದು, ಈವರೆಗೆ 4.41 ಕೋಟಿ (4,41,68,321) ಜನರು ಚೇತರಿಕೆ ಕಂಡಿದ್ದಾರೆ. ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದ ಅಡಿಯಲ್ಲಿ 220.65 ಕೋಟಿ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಲಸಿಕೆ ಪಡೆಯಲು WHO ಶಿಫಾರಸು: ಇದರ ಮಧ್ಯೆಯೇ ಮಂಗಳವಾರ ವಿಶ್ವ ಆರೋಗ್ಯ ಸಂಸ್ಥೆ(WHO) ಕೋವಿಡ್ ಲಸಿಕೆಗಳಿಗಾಗಿ ತನ್ನ ಶಿಫಾರಸುಗಳನ್ನು ಬದಲಾಯಿಸಿದೆ. ಹೆಚ್ಚಿನ ಅಪಾಯ ಎದುರಿಸುತ್ತಿರುವ ಜನರು ಕೊನೆಯ ಬೂಸ್ಟರ್ ಲಸಿಕೆ ಪಡೆದ 12 ತಿಂಗಳ ನಂತರ ಹೆಚ್ಚುವರಿ ಲಸಿಕೆ ಪಡೆಯಬೇಕು ಎಂದು ಸೂಚಿಸಿದೆ. ವೃದ್ಧರು ಮತ್ತು ವಯಸ್ಕರು ಲಸಿಕೆ ಪಡೆಯುವಂತೆ ಸೂಚಿಸಿದೆ.
ಇದನ್ನೂ ಓದಿ: ಭಾರತದಲ್ಲಿ 2,151 ಕೋವಿಡ್ ಕೇಸ್ ಪತ್ತೆ: ಇದು 5 ತಿಂಗಳಲ್ಲೇ ಅತಿ ಹೆಚ್ಚು