ಚಂಡೀಘಡ(ಪಂಜಾಬ್): ರಸ್ತೆ ಬದಿ ನಿಲ್ಲಿಸಲಾಗಿದ್ದ ತೈಲ ತುಂಬಿದ್ದ ಟ್ಯಾಂಕರ್ವೊಂದು ಸ್ಫೋಟಗೊಂಡ ಪರಿಣಾಮ ಮೂವರು ಮೃತಪಟ್ಟ ಘಟನೆ ಪಂಜಾಬ್ನ ಮೊಹಾಲಿ ಜಿಲ್ಲೆಯ ಸರ್ಸೆನಿ ಎಂಬ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಹೊರವಲಯದಲ್ಲಿರುವ ರಾಮ ಧಾಬಾ ಸಮೀಪದ ರಸ್ತೆ ಬದಿಯಲ್ಲಿ ತೈಲ ತುಂಬಿದ್ದ ಟ್ಯಾಂಕರ್ ನಿಲ್ಲಿಸಲಾಗಿತ್ತು. ಇದನ್ನು ಗಮನಿಸಿದ ಕೆಲವರು ಯಾರಿಗೂ ಗೊತ್ತಾಗದಂತೆ ತೈಲ ಕದಿಯಲು ಪ್ರಯತ್ನಿಸುತ್ತಿದ್ದರಂತೆ. ಈ ವೇಳೆ ತೈಲ ಲಿಕೇಜ್ ಆಗಿದ್ದರಿಂದ ಟ್ಯಾಂಕರ್ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಯ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟರೆ, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಜಸ್ವಿಂದರ್ ಸಿಂಗ್ (35), ಬಾಬ್ಲು (20) ಮತ್ತು ವಿಕ್ರಮ್ (24) ಎಂದು ಗುರುತಿಸಲಾಗಿದೆ. ಇನ್ನೊಬ್ಬ ವ್ಯಕ್ತಿಗೆ ಶೇ. 80ಕ್ಕಿಂತ ಹೆಚ್ಚು ಸುಟ್ಟ ಗಾಯಗಳಾಗಿದ್ದು ಆತನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಗಾಯಗೊಂಡವರು ಚಂಡೀಘಡದ ಪಿಜಿಐನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಟ್ಯಾಂಕರ್ನ ಚಾಲಕನಿಗೂ ಸುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ತೈಲ ಕಳ್ಳತನವನ್ನು ಪರಿಶೀಲಿಸಲು ಪ್ರದೇಶದ ಎಲ್ಲಾ ಧಾಬಾಗಳಲ್ಲಿ ತಪಾಸಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಕುರಿತು ತನಿಖೆ ನಡೆಸುವಂತೆ ಆದೇಶಿಸಲಾಗಿದೆ.