ಗುವಾಹಟಿ(ಅಸ್ಸೋಂ): ನ್ಯಾಯಾಲಯಗಳು ಆಗಾಗ ಕುತೂಹಲಕಾರಿ ತೀರ್ಪುಗಳನ್ನು ನೀಡುತ್ತಿರುತ್ತವೆ. ಈಗ ಅಸ್ಸೋಂನ ಗುವಾಹಟಿ ಹೈಕೋರ್ಟ್ ಕೂಡಾ ಇಂತಹದ್ದೇ ಒಂದು ಕುತೂಹಲಕಾರಿ ತೀರ್ಪು ನೀಡಿದೆ.
ಮುಸ್ಲಿಂ ಧರ್ಮದ ವ್ಯಕ್ತಿ, ಹಿಂದೂ ಧರ್ಮದ ಮಹಿಳೆಯನ್ನು ಎರಡನೇ ವಿವಾಹವಾದರೆ, ಅದು ಅಸಿಂಧು ಎಂಬ ತೀರ್ಪನ್ನು ಹೈಕೋರ್ಟ್ ನೀಡಿದೆ. ವಿಶೇಷ ವಿವಾಹ ತಿದ್ದುಪಡಿ ಕಾಯ್ದೆಯಡಿ ಕೋರ್ಟ್ ಈ ತೀರ್ಪು ನೀಡಿದೆ.
ತೀರ್ಪಿನ ಹಿನ್ನೆಲೆ: ಶಹಬುದ್ದೀನ್ ಅಹ್ಮದ್ ಎಂಬಾತ ಮೊದಲ ಪತ್ನಿಯನ್ನು ತೊರೆದು ದೀಪಮನಿ ಕಲಿತಾ ಎಂಬಾಕೆಯನ್ನು ಎರಡನೇ ವಿವಾಹವಾಗಿದ್ದನು. ಆಕೆಗೆ 12 ವರ್ಷದ ಮಗನಿದ್ದು, 2017ರ ಜುಲೈನಲ್ಲಿ ಆಕೆಯ ಪತಿ ಶಹಬುದ್ದೀನ್ ಅಹ್ಮದ್ ರಸ್ತೆ ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದನು.
ಶಹಬುದ್ದೀನ್ ಕಾಮರೂಪ ಜಿಲ್ಲೆಯ ಡೆಪ್ಯುಟಿ ಕಮೀಷನರ್ ಕಚೇರಿಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದನು. ಶಹಬುದ್ದೀನ್ ಮೃತಪಟ್ಟ ನಂತರ ದೀಪಮನಿ ಕಲಿತಾ ಪರಿಹಾರಕ್ಕಾಗಿ ಅರ್ಜಿಯನ್ನು ಸಲ್ಲಿಸಿದ್ದಳು. ಆದರೆ, ಸರ್ಕಾರದ ಪ್ರಾಧಿಕಾರಗಳು ಆಕೆಯ ಅರ್ಜಿಯನ್ನು ತಿರಸ್ಕರಿಸಿದ್ದವು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆಕೆ ಸಂವಿಧಾನದ 226ನೇ ವಿಧಿಯ ಅನ್ವಯ ಹೈಕೋರ್ಟ್ಗೆ ರಿಟ್ ಅರ್ಜಿಯನ್ನು ಆಕೆ ಸಲ್ಲಿಸಿದ್ದಳು. ಈ ಅರ್ಜಿಯ ವಿಚಾರಣೆ ನಡೆಸಿದ ಗುವಾಹಟಿ ಹೈಕೋರ್ಟ್ ನ್ಯಾಯಮೂರ್ತಿ ನ್ಯಾ.ಕಲ್ಯಾಣ್ ರೈ ಸುರಾನಾ ಈ ತೀರ್ಪನ್ನು ನೀಡಿದ್ದಾರೆ.
ವಿಶೇಷ ವಿವಾಹ ಕಾಯ್ದೆ-1954ರ ಸೆಕ್ಷನ್ 4ರ ಸೆಕ್ಟನ್ ಉಲ್ಲೇಖಿಸಿರುವ ಅವರು ಇದು ಅರ್ಜಿದಾರರು ಮತ್ತು ಲೇಟ್ ಶಹಾಬುದ್ದೀನ್ ಅವರ ನಡುವಿನ ವಿವಾದವಲ್ಲ ಎಂದಿದ್ದು, ಅರ್ಜಿದಾರರ ಪತಿ ಮೊದಲ ವಿವಾಹ ರದ್ದಾಗಿದೆ ಎಂಬುದನ್ನ ಉಲ್ಲೇಖಿಸಿರುವ ಯಾವುದೇ ದಾಖಲೆಯೂ ಇಲ್ಲ ಎಂದು ಹೇಳಿದೆ.
ಸುಪ್ರೀಂಕೋರ್ಟ್ನ ತೀರ್ಪು ವಿಗ್ರಹ ಆರಾಧಕನೊಂದಿಗೆ ಮುಸ್ಲಿಂ ವ್ಯಕ್ತಿಯ ವಿವಾಹವು ಮಾನ್ಯವಲ್ಲ , ಅನೂರ್ಜಿತವೂ ಅಲ್ಲ ಎಂದಿರುವುದನ್ನು ನ್ಯಾ.ಕಲ್ಯಾಣ್ ರೈ ಸುರಾನಾ ಈ ವೇಳೆ ಉಲ್ಲೇಖಿಸಿದ್ದಾರೆ.
ಈ ಪ್ರಕರಣದಲ್ಲಿ ಅರ್ಜಿದಾರರು ಸಾಂಪ್ರದಾಯಿಕ ಇಸ್ಲಾಂ ಕಾನೂನುಗಳ ಆಧಾರದ ಮೇಲೆ ವಿವಾಹವಾಗಿಲ್ಲ. ಆಕೆ ವಿಶೇಷ ವಿವಾಹ ಕಾಯ್ದೆ-1954 ರ ಅಡಿ ವಿವಾಹವಾಗಿದ್ದಾಳೆ ಮತ್ತು ಈ ಕಾಯ್ದೆಯ ಸೆಕ್ಷನ್ 5 ಮದುವೆ ಅಸಿಂಧು ಎಂದು ಹೇಳುತ್ತದೆ ಎಂದಿದ್ದಾರೆ.
ಇದಕ್ಕಿಂತ ಹೆಚ್ಚಾಗಿ ಅರ್ಜಿದಾರರು ಈಗಲೂ ತನ್ನ ಹಿಂದೂ ಹೆಸರನ್ನು ಬಳಸುತ್ತಿದ್ದಾರೆ ಮತ್ತು ಅರ್ಜಿದಾರರು ಇಸ್ಲಾಂ ಧರ್ಮವನ್ನು ಒಪ್ಪಿಕೊಂಡಿದ್ದಾರೆ ಎಂದು ತೋರಿಸಲು ಯಾವ ದಾಖಲೆಯೂ ಇಲ್ಲ. ಇದರಿಂದಾಗಿ ಎರಡನೇ ವಿವಾಹವನ್ನು ಮಾನ್ಯ ಎನ್ನಲಾಗುವುದಿಲ್ಲ ಎಂದು ಎಂದು ನ್ಯಾಯಾಲಯದ ಆದೇಶದ ಹೇಳಲಾಗಿದೆ. ಆದರೆ, ಪುತ್ರ ಪರಿಹಾರಕ್ಕೆ ಅರ್ಹ ಎಂದು ಆದೇಶದಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಪ್ರಬಲ ಭೂಕಂಪ