ತೆಂಕಸಿ(ತಮಿಳುನಾಡು): ತಮಿಳುನಾಡಿನ ವಿವಿಧ ಜಿಲ್ಲೆಗಳಲ್ಲಿ ನಡೆದ ಸ್ಥಳೀಯ ಪಂಚಾಯ್ತಿ ಚುನಾವಣೆ ಫಲಿತಾಂಶ ಬಹುತೇಕ ಬಹಿರಂಗಗೊಂಡಿದ್ದು, ಕೆಲವೊಂದು ವಾರ್ಡ್ಗಳಲ್ಲಿ ಅಚ್ಚರಿಯ ರಿಸಲ್ಟ್ ಹೊರಬಿದ್ದಿದೆ. ತೆಂಕಸಿಯಲ್ಲಿ 22 ವರ್ಷದ ಇಂಜಿನಿಯರ್ ಪದವೀಧರೆಗೆ ಮತದಾರ ಮಣೆ ಹಾಕಿದ್ದಾನೆ.
ಅಕ್ಟೋಬರ್ 6 ಹಾಗೂ 9ರಂದು ಒಟ್ಟು 9 ಜಿಲ್ಲೆಯ ಸ್ಥಳೀಯ ಪಂಚಾಯ್ತಿ ಚುನಾವಣೆ ನಡೆದಿದ್ದು, ನಿನ್ನೆ ಮತ ಎಣಿಕೆ ನಡೆಯಿತು. ಈ ಚುನಾವಣೆಯಲ್ಲಿ ಹೊಸದಾಗಿ ರಚನೆಯಾಗಿರುವ ತೆಂಕಾಸಿ ಜಿಲ್ಲೆಯಲ್ಲೂ ಮತದಾನವಾಗಿತ್ತು. ಶಿಕ್ಷಣ ಪಡೆದ ಅತಿ ಹೆಚ್ಚಿನ ಯುವಕರು ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು. ಕಡಾಂ ಪಂಚಾಯತ್ನಿಂದ ಇಂಜಿನಿಯರಿಂಗ್ ಪದವೀಧರೆ ಸ್ಪರ್ಧೆ ಮಾಡಿದ್ದು, ಇದೀಗ ಗೆಲುವು ಸಾಧಿಸಿ, ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.
22 ವರ್ಷದ ಚಾರುಕಲಾ ರವಿ ಸುಬ್ರಮಣಿಯನ್ ಹಾಗೂ ಶಾಂತಿ ದಂಪತಿಯ ಮಗಳಾಗಿದ್ದು, ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾಳೆ. ತಂದೆಯ ಸಲಹೆಯ ಮೇರೆಗೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು. ಇದೀಗ ಎದುರಾಳಿಗಳ ವಿರುದ್ಧ ದೊಡ್ಡ ಮಟ್ಟದ ಅಂತರದಿಂದ ಗೆಲುವು ದಾಖಲು ಮಾಡಿದ್ದಾಳೆ.
ಇದನ್ನೂ ಓದಿರಿ: ಸ್ಥಳೀಯ ಚುನಾವಣೆಯಲ್ಲಿ ಗೆದ್ದ 90ರ ವೃದ್ಧೆ.. ಠೇವಣಿ ಕಳೆದುಕೊಂಡ ಎದುರಾಳಿಗಳು
ಇನ್ನು ತಿರುನೆಲ್ವೇಲಿ ಜಿಲ್ಲೆಯ ಪಾಳೆಯಂಕೋಟೈ ವ್ಯಾಪ್ತಿಯ ಶಿವಂತಿಪಟ್ಟಿ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ 90 ವರ್ಷದ ವೃದ್ಧೆ ಭರ್ಜರಿ ಗೆಲುವು ದಾಖಲು ಮಾಡಿದ್ದು, ಇವರ ಎದುರಾಳಿಗಳಾಗಿ ಸ್ಪರ್ಧೆ ಮಾಡಿದ್ದ ಮತ್ತಿಬ್ಬರು ಠೇವಣಿ ಕಳೆದುಕೊಂಡಿದ್ದಾರೆ.