ಇಟಾ(ಉತ್ತರ ಪ್ರದೇಶ): ಮಹತ್ವದ ಕಾರ್ಯಾಚರಣೆಯಲ್ಲಿ ವಶಡಿಸಿಕೊಳ್ಳಲಾದ ಬರೋಬ್ಬರಿ 1,459 ಪೆಟ್ಟಿಗೆ ಅಕ್ರಮ ಮದ್ಯದ ಬಾಟಲಿಗಳು ಪೊಲೀಸ್ ಠಾಣೆಯಿಂದ ಕಾಣೆಯಾಗಿವೆ. ಇದಕ್ಕೆ ಇಲಿಗಳನ್ನೇ ಪೊಲೀಸರು ಹೊಣೆ ಮಾಡಿದ್ದಾರೆ.
ಕಳೆದ ವಾರ ಪೊಲೀಸರು ಕಾರ್ಯಾಚರಣೆ ನಡೆಸಿ ಲಕ್ಷಾಂತರ ರೂ. ಮೌಲ್ಯದ ಮದ್ಯವನ್ನು ಇಟಾ ಪೊಲೀಸ್ ಠಾಣೆಯಲ್ಲಿ ಇಟ್ಟಿದ್ದರು. ಒಂದು ವಾರದ ಬಳಿಕ ಅವು ನಾಪತ್ತೆಯಾಗಿದ್ದು, ಮಾಹಿತಿ ಕೇಳಿದಾಗ ಠಾಣೆಯ ಪೊಲೀಸರು ಇದಕ್ಕೆ ಇಲಿಗಳೇ ಕಾರಣ ಎಂದಿದ್ದಾರೆ.
ಪೊಲೀಸ್ ಠಾಣೆಯಲ್ಲಿದ್ದ ಇಲಿಗಳು ಪ್ಲಾಸ್ಟಿಕ್ ಕ್ಯಾನ್‌ಗಳನ್ನು ಕಡಿದು, ಗಾಜಿನ ಬಾಟಲಿಗಳಿಗೆ ಹಾನಿ ಮಾಡಿವೆ ಎಂದು ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಎಡಿಜಿ ನೇತೃತ್ವದ ತಂಡ ತನಿಖೆ ನಡೆಸಲು ಮುಂದಾಗಿದೆ. ಮದ್ಯದ ಒಟ್ಟು ಮೌಲ್ಯ 35 ಲಕ್ಷ ರೂ. ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಸಿಡಿ ಲೇಡಿ ಕೆಂಪೇಗೌಡ ಏರ್ಪೋರ್ಟ್ಗೆ ಬಂದಿಳಿದ ವಿಡಿಯೋ
ಪ್ರಾಥಮಿಕ ತನಿಖೆಯ ಪ್ರಕಾರ, ಪೊಲೀಸರು ಮದ್ಯದ ಬಾಟಲಿ ಮಾರಾಟ ಮಾಡಿದ್ದಾಗಿ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಎಸ್ಎಚ್ಒ ಮತ್ತು ಗುಮಾಸ್ತರ ವಿರುದ್ಧ ಎಫ್ಐಆರ್ ದಾಖಲಿಸಿ ಸೇವೆಯಿಂದ ಅಮಾನತು ಮಾಡಲಾಗಿದೆ. ಜತೆಗೆ ಇಬ್ಬರು ಪೊಲೀಸ್ ಠಾಣಾ ಅಧಿಕಾರಿಗಳ ವಿರುದ್ಧ ಸೆಕ್ಷನ್ 409 (ಸಾರ್ವಜನಿಕ ಸೇವಕರಿಂದ ನಂಬಿಕೆಯ ಉಲ್ಲಂಘನೆ) ಮತ್ತು ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಅಬಕಾರಿ ಕಾಯ್ದೆಯ ನಿಬಂಧನೆಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.