ಅಗರ್ತಲಾ: ತ್ರಿಪುರಾದಲ್ಲಿ ಶೀಘ್ರದಲ್ಲೇ ರಾಜಕೀಯ ಬದಲಾವಣೆಯಾಗಬಹುದು ಎಂದು ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಬಿರಾಜಿತ್ ಸಿನ್ಹಾ ಸೋಮವಾರ ಹೇಳಿದ್ದಾರೆ. ಹತ್ತಾರು ಬಿಜೆಪಿ ಶಾಸಕರು ತಮ್ಮೊಂದಿಗೆ ಸಂಪರ್ಕದಲ್ಲಿದ್ದು, ಕಾಂಗ್ರೆಸ್ ಸೇರಲು ಸಿದ್ಧರಾಗಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ.
ತ್ರಿಪುರಾದ ಖೋವಾಯ್ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಸಿನ್ಹಾ, 100 ವರ್ಷಗಳಿಗಿಂತ ಹೆಚ್ಚು ಕಾಲ ಕಾಂಗ್ರೆಸ್ ಜನರ ಹಿತಾಸಕ್ತಿಗಾಗಿ ಹೋರಾಡಿದ್ದು, ಅದು ಮುಂದಿನ ದಿನಗಳಲ್ಲಿಯೂ ಮುಂದುವರಿಯುತ್ತದೆ. ಬೆದರಿಕೆ, ದೈಹಿಕ ಹಲ್ಲೆ ಇತ್ಯಾದಿಗಳನ್ನು ಬಳಸಿ ಕಾಂಗ್ರೆಸ್‌ನ ಹೋರಾಟವನ್ನು ತಡೆಯಲು ಬಿಜೆಪಿಗೆ ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಒಂದು ಡಜನ್‌ಗೂ ಹೆಚ್ಚು ಬಿಜೆಪಿ ಶಾಸಕರು ಶೀಘ್ರದಲ್ಲೇ ಪಕ್ಷ ತೊರೆಯಲಿದ್ದಾರೆ. ಅವರೆಲ್ಲರೂ ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ. ರಾಜಕೀಯ ಮುಖ್ಯವಾಹಿನಿಯಿಂದ ಬೇರ್ಪಡೆಯಾಗಿರುವ ಭಾವನೆಯನ್ನು ಅವರು ಅನುಭವಿಸುತ್ತಿರುವುದರಿಂದ ಪಕ್ಷ ತೊರೆಯಲಿದ್ದಾರೆ ಎಂದು ತಿಳಿಸಿದರು.
ಬೈಕ್‌ನಲ್ಲಿ ಬಂದು ಜನರನ್ನು ಬೆದರಿಸುವ ಬಿಜೆಪಿಯ ದುಷ್ಕರ್ಮಿಗಳು (ಬೈಕ್ ಬಾಹಿನಿ) ಕೂಡ ಪಕ್ಷ ಬದಲಾವಣೆ ಮಾಡಲಿದ್ದಾರೆ ಎಂದು ಅವರು ಹೇಳಿದರು. ಈ ಮಧ್ಯೆ, ಬೆಂಕಿಗಾಹುತಿಯಾದ ಕಾಂಗ್ರೆಸ್ ಭವನವನ್ನು ಪರಿಶೀಲಿಸಿ, ಅದರ ಪುನರ್ ನಿರ್ಮಾಣಕ್ಕೆ ಎಲ್ಲ ನೆರವು ನೀಡುವುದಾಗಿ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಅಭಿಪ್ರಾಯ ವಿನಿಮಯ ಮಾಡಿಕೊಂಡರು ಮತ್ತು ಪಕ್ಷ ಸಂಘಟನೆ, ಪುನಶ್ಚೇತನದ ಬಗ್ಗೆ ಚರ್ಚಿಸಿದರು.
ಇದನ್ನು ಓದಿ:ಯಾರ ಬತ್ತಳಿಕೆ ಸೇರಲಿವೆ ಬಿಲ್ಲು-ಬಾಣ? ಆ.1 ರಂದು ಸುಪ್ರೀಂ ಕೋರ್ಟ್ ವಿಚಾರಣೆ