ಬೆಂಗಳೂರು: ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಮೊದಲ ಸಚಿವ ಸಂಪುಟ ಸಭೆಯಲ್ಲೇ ಈಡೇರಿಸುವುದಾಗಿ ವಾಗ್ದಾನ ಮಾಡಿ ಕಾಂಗ್ರೆಸ್ ಪಕ್ಷ ನೀಡಿದ ಐದು ಗ್ಯಾರಂಟಿಗಳು ಅತ್ಯುತ್ತಮವಾಗಿ ಫಲಕೊಟ್ಟಿವೆ. ರಾಜ್ಯದಲ್ಲಿ ಆಡಳಿತ ಪಕ್ಷದ ನಿರೀಕ್ಷೆಯನ್ನು ಧೂಳಿಪಟ ಮಾಡಿ ಅಧಿಕಾರದ ಗದ್ದುಗೆ ಏರಿಸಲು ಇವು ಸಹಕರಿಸಿವೆ. ಶತಾಯಗತಾಯ ಇನ್ನೊಮ್ಮೆ ಅಧಿಕಾರಕ್ಕೆ ಬರುವ ಬಿಜೆಪಿ ಪ್ರಯತ್ನಕ್ಕೆ ರಾಜ್ಯದ ಮತದಾರ ಕಲ್ಲು ಹಾಕಿದ್ದು, ಕಾಂಗ್ರೆಸ್ನ ಗ್ಯಾರಂಟಿಗೆ ಬಹುಮತದ ಮುದ್ರೆ ಒತ್ತಿದ್ದಾನೆ. ಪ್ರಣಾಳಿಕೆ ಬಿಡುಗಡೆಗೂ ಮುನ್ನವೇ ರಾಜ್ಯ ಕಾಂಗ್ರೆಸ್ ನಾಯಕರು, ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಮೂಲಕ ಐದು ಪ್ರತ್ಯೇಕ ವೇದಿಕೆ, ಸಮಯ ಹಾಗೂ ಪ್ರದೇಶಗಳಲ್ಲಿ ಗ್ಯಾರಂಟಿಗಳನ್ನು ಘೋಷಣೆ ಮಾಡಿಸಿದ್ದರು. ಇದು ನಿಜಕ್ಕೂ ಕೈ ಹಿಡಿದಿದ್ದು ಕಾಂಗ್ರೆಸ್ ಪಕ್ಷವನ್ನು ಅಧಿಕಾರದ ಗದ್ದುಗೆ ಏರಿಸಲು ಸಹಕಾರಿಯಾಗಿಸಿದೆ.
ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಮುಖ ಐದು ಗ್ಯಾರಂಟಿಗಳನ್ನು ಕಾಂಗ್ರೆಸ್ ಘೋಷಿಸಿತ್ತು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್, ಪ್ರಣಾಳಿಕೆ ರಚನಾ ಸಮಿತಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಒಟ್ಟಾಗಿ ರಾಜ್ಯದ ಆರ್ಥಕ ಸ್ಥಿತಿಯನ್ನು ಅವಲೋಕಿಸಿ ನಾವು ಈಡೇರಿಸಬಲ್ಲೆವು ಎಂದು ಹೇಳಿಕೊಂಡು ಈ ಕೆಳಗಿನ ಐದು ಗ್ಯಾರಂಟಿಗಳನ್ನು ಘೋಷಿಸಿದ್ದರು. ಇದಕ್ಕೆ ಬೆಂಬಲ ವ್ಯಕ್ತಪಡಿಸಿದ ಮತದಾರರು ಕಾಂಗ್ರೆಸ್ಗೆ ಬಹುಮತ ನೀಡಿದ್ದಾರೆ.
ಕೈಹಿಡಿದ ಐದು ಗ್ಯಾರಂಟಿ: ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡಿಕೆ ಮೊದಲ ಘೋಷಣೆ. ಬೆಳಗಾವಿಯ ಚಿಕ್ಕೋಡಿಯಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯ ಉದ್ಘಾಟನಾ ಸಮಾವೇಶದಲ್ಲಿ ಕಾಂಗ್ರೆಸ್ ಈ ಘೋಷಣೆ ಮಾಡಿತ್ತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಪರಿಷತ್ ಪ್ರತಿಪಕ್ಷದ ನಾಯಕ ಬಿಕೆ ಹರಿಪ್ರಸಾದ್ ಅವರು ಈ ಘೋಷಣೆ ಮಾಡಿದ್ದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಮಹಿಳಾ ಸಮಾವೇಶದಲ್ಲಿ ಎರಡನೇ ಘೋಷಣೆಯನ್ನು ಕಾಂಗ್ರೆಸ್ ಮಾಡಿತ್ತು. ಎಐಸಿಸಿ ನಾಯಕಿ ಪ್ರಿಯಾಂಕಾ ಗಾಂಧಿ ಸಮ್ಮುಖದಲ್ಲಿ ಈ ಯೋಜನೆಯನ್ನು ಘೋಷಣೆ ಮಾಡಿತ್ತು. ರಾಜ್ಯದ ಎಲ್ಲ ಮಹಿಳೆಯರಿಗೆ ಪ್ರತಿ ತಿಂಗಳು ತಲಾ 2000 ರೂಪಾಯಿ ಉಚಿತವಾಗಿ ನೀಡುವುದು ಕಾಂಗ್ರೆಸ್ ಎರಡನೇ ಗ್ಯಾರಂಟಿಯಾಗಿದೆ. ಉಚಿತ ಅಕ್ಕಿ ನೀಡಿಕೆ ಕಾಂಗ್ರೆಸ್ ಘೋಷಣೆ ಮಾಡಿರುವ ಮೂರನೇ ಗ್ಯಾರಂಟಿ ಆಗಿದೆ. ಉಚಿತ ಅಕ್ಕಿಯನ್ನು 10 ಕೆಜಿಗೆ ಹೆಚ್ಚಳ ಮಾಡುವುದಾಗಿ ಘೋಷಣೆ ಮಾಡಿದೆ. ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಇದು ಅನ್ವಯ ಆಗಲಿದೆ.
ಬೆಳಗಾವಿಯಲ್ಲಿ ಹಮ್ಮಿಕೊಂಡಿದ್ದ ಯುವಕ್ರಾಂತಿ ಸಮಾವೇಶದಲ್ಲಿ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಗ್ಯಾರಂಟಿ ನಂ.4 ಘೋಷಣೆ ಮಾಡಿದ್ದರು. ಕೈ ಪಕ್ಷ ಅಧಿಕಾರಕ್ಕೆ ಬಂದರೆ ಯುವನಿಧಿ ಎಂಬ ಯೋಜನೆಯಲ್ಲಿ ನಿರುದ್ಯೋಗಿ ಪದವೀಧರರಿಗೆ ಆರ್ಥಿಕ ನೆರವು ನೀಡುವುದು ಇದರ ವಿಚಾರ. ಯುವನಿಧಿ ಯೋಜನೆಯಲ್ಲಿ ನಿರುದ್ಯೋಗಿ ಪದವೀಧರರಿಗೆ ಪ್ರತಿ ತಿಂಗಳು 3,000 ಹಾಗೂ ಡಿಪ್ಲೊಮಾ ಪದವೀಧರರಿಗೆ ಪ್ರತಿ ತಿಂಗಳು 1,500 ರೂ. ಭತ್ಯೆ ನೀಡಲಿದ್ದಾರೆ. ಕರ್ನಾಟಕಕ್ಕೆ 5ನೇ ದೊಡ್ಡ ಗ್ಯಾರಂಟಿಯನ್ನು ರಾಹುಲ್ ಗಾಂಧಿ ಘೋಷಣೆ ಮಾಡಿದ್ದರು. ಕೈ ಪಕ್ಷ ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೇ ಮಹಿಳೆಯರಿಗೆ ಉಚಿತ ಸಾರಿಗೆ ಸೌಲಭ್ಯ ನೀಡುವುದು ಕಾಂಗ್ರೆಸ್ನ 5ನೇ ಗ್ಯಾರಂಟಿಯಾಗಿದೆ.
ಇನ್ನೆರಡು ಘೋಷಣೆ: ಪ್ರಣಾಳಿಕೆ ಬಿಡುಗಡೆಗೆ ಮುನ್ನವೇ ಈ ಮೇಲಿನ ಐದು ಘೋಷಣೆ ಜತೆಗೆ ಇನ್ನೆರಡು ಘೋಷಣೆಯನ್ನು ಸಹ ಕಾಂಗ್ರೆಸ್ ಮಾಡಿತ್ತು. ಅಂಗನವಾಡಿ ಕಾರ್ಯಕರ್ತೆಯರಿಗೆ 15 ಸಾವಿರ ರೂ. ವರೆಗೆ ವೇತನ ಹೆಚ್ಚಿಸುವುದು ಕಾಂಗ್ರೆಸ್ನ ಆರನೇ ಘೋಷಣೆ. ಆಶಾ ಕಾರ್ಯಕರ್ತೆಯರಿಗಾಗಿ 8 ಸಾವಿರ ರೂ. ವೇತನ ಹೆಚ್ಚಳ ಮಾಡಲಾಗುವುದು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಮೂಲಕ ಘೋಷಣೆ ಮಾಡಿಸಲಾಗಿತ್ತು. ಖಾನಾಪುರದಲ್ಲಿ ನಡೆದ ಸಮಾವೇಶದಲ್ಲಿ ಈ ಘೋಷಣೆ ಮಾಡಲಾಗಿತ್ತು.
ಅಂತಿಮವಾಗಿ ಎಐಸಿಸಿ ನಾಯಕ ರಾಹುಲ್ ಗಾಂಧಿ ಮೂಲಕ ಏಳನೇ ಘೋಷಣೆ ಮಾಡಿಸಲಾಗಿತ್ತು. ರೈತರಿಗಾಗಿ ವಿಶೇಷ 'ಕೃಷಿ ನಿಧಿ' ಯೋಜನೆಯನ್ನು ರಾಹುಲ್ ಗಾಂಧಿ ಅರಸಿಕೆರೆಯಲ್ಲಿ ಘೋಷಿಸಿದ್ದಾರೆ. ರೈತರ ಹಿತ ಕಾಯುವ ಉದ್ದೇಶದಿಂದ ಕೃಷಿ ನಿಧಿ ಯೋಜನೆಯನ್ನು ಘೋಷಣೆ ಮಾಡಿದ್ದಾರೆ. ಈ ಯೋಜನೆಯ ಮುಖ್ಯಾಂಶವೆಂದರೆ, 5 ವರ್ಷಗಳಲ್ಲಿ ರೈತರಿಗೆ ಬಜೆಟ್ ನಲ್ಲಿ 1.5 ಲಕ್ಷ ಕೋಟಿ ರೂ. ಅನುದಾನ ಮೀಸಲಾಗಿರಿಸುವುದು. ಪ್ರತಿ ವರ್ಷ ಬಜೆಟ್ನಿಂದ ರೂ. 30,000 ಕೋಟಿ ರೈತರಿಗೆ ಸೇರಲಿದೆ. ತೆಂಗು ಮತ್ತು ಅಡಿಕೆ ಬೆಳೆಗಾರರಿಗೆ ಕನಿಷ್ಠ ಬೆಂಬಲ ಬೆಲೆ, ಹಾಲಿನ ಸಬ್ಸಿಡಿ ರೂ. 5 ರಿಂದ ರೂ 7 ಕ್ಕೆ ಹೆಚ್ಚಳ ಮಾಡುವ ಘೋಷಣೆ ಮಾಡಿದ್ದಾರೆ.
ಇವೆಲ್ಲಾ ಘೋಷಣೆಗಳ ಜತೆ ಕಾಂಗ್ರೆಸ್ ನಾಯಕರು ಜನರಲ್ಲಿ ಮೂಡಿಸಿದ ಧನಾತ್ಮಕ ಭಾವನೆ ಹಾಗೂ ತಮ್ಮ ಗ್ಯಾರಂಟಿ ಘೋಷಣೆಗಳನ್ನು ಅತ್ಯಂತ ಸಮರ್ಪಕವಾಗಿ ಜನರಿಗೆ ತಲುಪಿಸಿರುವುದು ಉತ್ತಮ ಬಹುಮತ ಗಳಿಸಲು ಸಹಕಾರಿಯಾಗಿದೆ. ಈ ಭರವಸೆಗಳನ್ನು ಮೊದಲ ಸಚಿವ ಸಂಪುಟ ಸಭೆಯಲ್ಲೇ ಘೋಷಿಸುವ ಭರವಸೆ ಕಾಂಗ್ರೆಸ್ ನಾಯಕರು ನೀಡಿದ್ದಾರೆ. ಇದರ ಲಾಭ ಅಂದುಕೊಂಡಂತೆ ಎಲ್ಲರಿಗೂ ಸಿಗುವುದಾ ಅಥವಾ ಬದಲಾವಣೆ ಆಗಲಿದೆಯಾ ಅನ್ನುವುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ : ಮರುಕಳಿಸಿದ ಇತಿಹಾಸ: ಆಡಳಿತ ಪಕ್ಷಕ್ಕೆ ಸೋಲು, 1999ರ ನಂತರ ಕಾಂಗ್ರೆಸ್ಗೆ ಹೆಚ್ಚು ಸ್ಥಾನ