ಕರ್ನಾಟಕ

karnataka

ETV Bharat / snippets

ಉಪ ಲೋಕಾಯುಕ್ತರಾಗಿ ನಿವೃತ್ತ ನ್ಯಾಯಮೂರ್ತಿ ಬಿ.ವೀರಪ್ಪ ಪ್ರಮಾಣ ಸ್ವೀಕಾರ

By ETV Bharat Karnataka Team

Published : Jul 6, 2024, 8:23 PM IST

deputy lokayukta
ಉಪ ಲೋಕಾಯುಕ್ತರಾಗಿ ನಿವೃತ್ತ ನ್ಯಾಯಮೂರ್ತಿ ಬಿ.ವೀರಪ್ಪ ಪ್ರಮಾಣ ಸ್ವೀಕಾರ (ETV Bharat)

ಬೆಂಗಳೂರು:ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಉಪ ಲೋಕಾಯುಕ್ತರಾಗಿ ಪ್ರಮಾಣ ಸ್ವೀಕರಿಸಿದರು. ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಕರ್ನಾಟಕ ಲೋಕಾಯುಕ್ತದ ಉಪ ಲೋಕಾಯುಕ್ತರ ಪದವಿಯ ಅಧಿಕಾರ ಪ್ರಮಾಣವಚನ ಬೋಧಿಸಿದರು.

2015ರಲ್ಲಿ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದ ಬಿ.ವೀರಪ್ಪ ಅವರು, 2016-2023ರವರೆಗೆ ಹೈಕೋರ್ಟ್‌ನ ಕಾಯಂ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸಿದ್ದರು. ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಅಧಿಕಾರವನ್ನು ರದ್ದುಗೊಳಿಸಿ, ಲೋಕಾಯುಕ್ತ ಸಂಸ್ಥೆಯ ಅಧಿಕಾರವನ್ನು ಪುನರ್​ ಸ್ಥಾಪನೆ ಮಾಡಿದ ಹೆಗ್ಗಳಿಕೆ ವೀರಪ್ಪ ಅವರದ್ದಾಗಿದೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳ ತನಿಖೆಯ ಅಧಿಕಾರವನ್ನು ಲೋಕಾಯುಕ್ತ ಪೊಲೀಸ್‌ ವಿಭಾಗಕ್ಕೆ ಮರುಸ್ಥಾಪಿಸಿ ಐತಿಹಾಸಿಕ ತೀರ್ಪು ನೀಡಿದ್ದರು. ಬಿ.ವೀರಪ್ಪ ಅವರು ಬಿಜೆಪಿ ಸರ್ಕಾರದ ಅವಧಿಯಲ್ಲಾದ ಪಿಎಸ್​​ಐ ನೇಮಕಾತಿ ಹಗರಣದ ತನಿಖೆಗೆ ನೇಮಿಸಲಾಗಿದ್ದ ಆಯೋಗದ ಅಧ್ಯಕ್ಷರಾಗಿದ್ದರು‌.

ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಾಯುಕ್ತ ನ್ಯಾಯಾಮೂರ್ತಿ ಬಿ.ಎಸ್.ಪಾಟೀಲ್, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಮತ್ತು ಬಿ.ವೀರಪ್ಪ ಅವರ ಕುಟುಂಬ ಸದಸ್ಯರು ಭಾಗವಹಿಸಿದ್ದರು.

ABOUT THE AUTHOR

...view details