ಚಿಕ್ಕಮಗಳೂರು:ದಟ್ಟ ಮಂಜು ಕವಿದಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಪ್ರವಾಸಿ ಕಾರೊಂದು 30 ಅಡಿ ಎತ್ತರದಿಂದ ಕೆಳಕ್ಕೆ ಬಿದ್ದಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಸುಂಕಸಾಲೆ ಗ್ರಾಮದ ಬಳಿ ಸಂಭವಿಸಿದೆ. ಬೆಂಗಳೂರಿನಿಂದ ಹೊರನಾಡಿಗೆ ಹೋಗುತ್ತಿದ್ದ ಕಾರು ರಸ್ತೆ ತಿರುವಿನಲ್ಲಿ ಪಲ್ಟಿಯಾಗಿದೆ.
ಚಿಕ್ಕಮಗಳೂರು: ನಿಯಂತ್ರಣ ತಪ್ಪಿ 30 ಅಡಿ ಎತ್ತರದಿಂದ ಗ್ರಾಪಂ ಆವರಣಕ್ಕೆ ಬಿದ್ದ ಕಾರು
Published : Sep 21, 2024, 3:54 PM IST
30 ಅಡಿ ಎತ್ತರದ ರಸ್ತೆಯಿಂದ ಪಕ್ಕದ ಕೆಳಭಾಗದಲ್ಲಿದ್ದ ಸುಂಕಸಾಲೆ ಗ್ರಾಮ ಪಂಚಾಯಿತಿ ಆವರದೊಳಗೆ ಕಾರು ಬಿದ್ದಿದೆ. ಕಾರಿನಲ್ಲಿ ಐವರು ಪ್ರಯಾಣಿಕರಿದ್ದು, ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಮೇಲಿಂದ ಬಿದ್ದ ರಭಸಕ್ಕೆ ಕಾರು ಬಹುತೇಕ ಜಖಂಗೊಂಡಿದೆ. ಘಟನೆಯಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಮೂಡಿಗೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಿಂದ ಜಾವಳಿ, ಸುಂಕಸಾಲೆ, ಹಿರೇಬೈಲು ಮಾರ್ಗವಾಗಿ ಕಳಸ - ಹೊರನಾಡಿಗೆ ಹೋಗುವ ಮಾರ್ಗವು ಎತ್ತರದ ಪ್ರದೇಶ ಹಾಗೂ ಕಾಫಿತೋಟಗಳ ಮಧ್ಯೆ ತಿರುವುಗಳಿಂದ ಕೂಡಿದೆ. ಹಾಗಾಗಿ, ಪ್ರವಾಸಿಗರು ಅತ್ಯಂತ ಜಾಗರೂಕರಾಗಿ ವಾಹನ ಚಲಾಯಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.