ಸಿಎಂ ರಾಜೀನಾಮೆಗೆ ಒತ್ತಾಯ: ವಾಲ್ಮೀಕಿ ನಿಗಮದ ಅಕ್ರಮ ಖಂಡಿಸಿ ಬಳ್ಳಾರಿಯಲ್ಲಿ ಮುಂದುವರಿದ ಪ್ರತಿಭಟನೆ - Ballari BJP Protest - BALLARI BJP PROTEST
Published : Jun 29, 2024, 12:35 PM IST
ಬಳ್ಳಾರಿ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬಳ್ಳಾರಿ ನಗರದಲ್ಲಿ ಬಿಜೆಪಿ ಶುಕ್ರವಾರ ಆರಂಭಿಸಿದ ಪ್ರತಿಭಟನೆ ಎರಡನೇ ದಿನಕ್ಕೆ ಮುಂದುವರೆದಿದೆ. ಮಾಜಿ ಸಚಿವ ಶ್ರೀರಾಮುಲು ನೇತೃತ್ವದಲ್ಲಿ ಬಿಜೆಪಿ ನಾಯಕರು ಜಿಲ್ಲಾಧಿಕಾರಿ ಕಚೇರಿಯೆದುರು ಧರಣಿ ಕುಳಿತಿದ್ದಾರೆ.
ನಿನ್ನೆ ನಗರದಲ್ಲಿ ಮೆರವಣಿಗೆ ನಡೆಸಿದ್ದ ಬಿಜೆಪಿ ನಾಯಕರು, ಮಧ್ಯಾಹ್ನದ ಹೊತ್ತಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಆರಂಭಿಸಿದ್ದರು. ಧರಣಿಯನ್ನು ಆಹೋರಾತ್ರಿ ಮುಂದುವರಿಸಲು ಪಕ್ಷದ ನಾಯಕರು ನಿರ್ಧರಿಸಿದರು. ಅದರಂತೆ, ಶುಕ್ರವಾರ ರಾತ್ರಿಯಿಡೀ ನಾಯಕರು ಜಿಲ್ಲಾಧಿಕಾರಿ ಕಚೇರಿ ಎದುರೇ ಕುಳಿತಿದ್ದರು. ಶ್ರೀರಾಮುಲು ಧರಣಿ ಸ್ಥಳದಲ್ಲೇ ರಾತ್ರಿಯ ಭೋಜನ ಸ್ವೀಕರಿಸಿದರು.
ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಗರಣ: ಕಂಪನಿಗಳ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ವಹಿವಾಟು - Valmiki Nigam Scam
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀರಾಮುಲು, ವಾಲ್ಮೀಕಿ ನಿಗಮದಲ್ಲಿ ಸರ್ಕಾರದ ಪಾತ್ರ ಇರುವುದರಿಂದ ಸಿಎಂ ರಾಜೀನಾಮೆ ನೀಡಬೇಕು. ಶಾಸಕ ಬಿ.ನಾಗೇಂದ್ರ ಅವರನ್ನು ಕೂಡಲೇ ಬಂಧಿಸಬೇಕು. ಹಗರಣದ ಪ್ರತಿ ಪೈಸೆಯನ್ನೂ ವಸೂಲಿ ಮಾಡಬೇಕು. ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಒತ್ತಾಯಿಸಿದರು.