ಕಾಶ್ಮೀರದಲ್ಲಿ ಸಚಿನ್ ತೆಂಡೂಲ್ಕರ್; ಪುಲ್ವಾಮಾ ಬ್ಯಾಟ್ ತಯಾರಿಕಾ ಕಾರ್ಖಾನೆಗೆ ಭೇಟಿ - ಕಾಶ್ಮೀರಕ್ಕೆ ಸಚಿನ್ ತೆಂಡೂಲ್ಕರ್ ಭೇಟಿ
Published : Feb 17, 2024, 3:59 PM IST
ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಭಾರತ ತಂಡದ ಮಾಜಿ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಶನಿವಾರ ಕಣಿವೆ ನಾಡು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. ದಿಢೀರ್ ಭೇಟಿ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ ಲಿಟಲ್ ಮಾಸ್ಟರ್, ಪುಲ್ವಾಮಾ ಬ್ಯಾಟ್ ತಯಾರಿಕಾ ಕಾರ್ಖಾನೆಗೂ ಭೇಟಿ ಕೊಟ್ಟರು. ಸಚಿನ್ ಅವರಿಗೆ ಪತ್ನಿ ಅಂಜಲಿ ತೆಂಡೂಲ್ಕರ್ ಮತ್ತು ಪುತ್ರಿ ಸಾರಾ ತೆಂಡೂಲ್ಕರ್ ಸಹ ಸಾಥ್ ನೀಡಿದ್ದರು.
ಜಮ್ಮು-ಶ್ರೀನಗರ ಹೆದ್ದಾರಿಯ ಪಕ್ಕದಲ್ಲಿರುವ ಪುಲ್ವಾಮಾ ಜಿಲ್ಲೆಯ ಅವಂತಿಪೋರಾ ಟೌನ್ಶಿಪ್ನಲ್ಲಿರುವ ಬ್ಯಾಟ್ ತಯಾರಿಕಾ ಕಾರ್ಖಾನೆಗೆ ಸಚಿನ್ ತೆಂಡೂಲ್ಕರ್ ಭೇಟಿ ನೀಡಿ, ಅಲ್ಲಿ ಬ್ಯಾಟ್ಗಳನ್ನು ಪರಿಶೀಲಿಸಿದರು. ಈ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ, ಫೋಟೋಗಳು ಹರಿದಾಡುತ್ತಿವೆ.
ಬ್ಯಾಟ್ ತಯಾರಿಕಾ ಕಾರ್ಖಾನೆಗೆ ಆಗಮಿಸಿದ ಖ್ಯಾತ ಕ್ರಿಕೆಟಿಗ ಸಚಿನ್ ಅವರನ್ನು ಅಲ್ಲಿನ ಕುಶಲಕರ್ಮಿಗಳು ಖುಷಿಯಿಂದ ಬರಮಾಡಿಕೊಂಡರು. ನಂತರ ಕಾರ್ಖಾನೆಯಲ್ಲಿ ಒಂದು ಸುತ್ತು ಹಾಕಿದ ಸಚಿನ್, ಬ್ಯಾಟ್ ತಯಾರಿಕಾ ಪ್ರಕ್ರಿಯೆಯನ್ನು ತುಂಬಾ ಆಸಕ್ತಿಯಿಂದ ವೀಕ್ಷಿಸಿದರು. ಅಲ್ಲದೇ, ನುರಿತ ಕುಶಲಕರ್ಮಿಗಳೊಂದಿಗೆ ಮಾತುಕತೆ ನಡೆಸಿದರು. ಇದೇ ವೇಳೆ, ಕ್ರಿಕೆಟ್ ಬ್ಯಾಟ್ ರಚಿಸುವಲ್ಲಿನ ಕುಶಲತೆಯ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ. ಕಾಶ್ಮೀರವು ಉತ್ತಮ ಗುಣಮಟ್ಟದ ಕ್ರಿಕೆಟ್ ಬ್ಯಾಟ್ಗಳ ತಯಾರಿಕೆಗೆ ಹೆಸರುವಾಸಿಯಾಗಿದೆ.
ಮತ್ತೊಂದೆಡೆ, ತಮ್ಮ ಈ ಕಾಶ್ಮೀರದ ಭೇಟಿ ಸಂದರ್ಭದಲ್ಲಿ ತೆಂಡೂಲ್ಕರ್, ಪ್ಯಾರಾ ಕ್ರಿಕೆಟಿಗ ಅಮೀರ್ ಹುಸೇನ್ ಲೋನ್ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಯುವ ಕ್ರಿಕೆಟಿಗರಿಗೆ ಸ್ಫೂರ್ತಿಯಾಗಿರುವ ಪ್ರತಿಭಾವಂತ ಅಮೀರ್ ಬಗ್ಗೆ ಸಚಿನ್ ಇತ್ತೀಚೆಗೆ ಪೋಸ್ಟ್ವೊಂದನ್ನು ಶೇರ್ ಮಾಡಿ, ನಾನು ಒಂದು ದಿನ ಆತನನ್ನು ಭೇಟಿಯಾಗುತ್ತೇನೆ ಎಂದು ಹೇಳಿದ್ದರು.
ಇದನ್ನೂ ಓದಿ: ಬೆಳಗ್ಗೆ ಭಾರತ ತಂಡಕ್ಕೆ ಪಾದಾರ್ಪಣೆಯ ಆನಂದ ಭಾಷ್ಪ; ಸಂಜೆ ದಾಖಲೆಯ ಅರ್ಧಶತಕ ಸಿಡಿಸಿ ಸಂಭ್ರಮ