ಚಿಕ್ಕಮಗಳೂರು ಭಾಗದಲ್ಲಿ ಆರು ದಿನಗಳಿಂದ ಸುರಿಯುತ್ತಿರುವ ಮಳೆ: ನಿಧಾನವಾಗಿ ತುಂಬುತ್ತಿವೆ ಕೆರೆಕಟ್ಟೆಗಳು - RAIN IN CHIKKAMAGALURU - RAIN IN CHIKKAMAGALURU
Published : May 15, 2024, 10:53 PM IST
ಚಿಕ್ಕಮಗಳೂರು:ಜಿಲ್ಲೆಯಲ್ಲಿ ಮಳೆ ಆರ್ಭಟ ಇಂದು ಸಹ ಮುಂದುವರೆದಿದೆ. ಕಳೆದ ಆರು ದಿನಗಳಿಂದ ನಿರಂತರವಾಗಿ ಚಿಕ್ಕಮಗಳೂರು ನಗರ ಸೇರಿದಂತೆ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು, ನಿಧಾನವಾಗಿ ಕೆರೆಕಟ್ಟೆಗಳು ತುಂಬಲು ಪ್ರಾರಂಭವಾಗಿವೆ.
ಕಳೆದ ನಾಲ್ಕೈದು ತಿಂಗಳಿನಿಂದ ಹನಿ ನೀರಿಗೂ ಪರದಾಡುವಂತಹ ಪರಿಸ್ಥಿತಿ ಮಲೆನಾಡು ಭಾಗದಲ್ಲಿ ಉದ್ಭವವಾಗಿತ್ತು. ಉತ್ತಮ ಮಳೆ ಆಗಲಿ ಎಂದು ಮಲೆನಾಡಿನ ಜನರು ದೇವರ ಮೊರೆ ಹೋಗಿದ್ದರು. ಆದರೆ, ಭಕ್ತರ ಭಕ್ತಿಗೆ ಮೆಚ್ಚಿ ವರುಣದೇವ ಈಗ ಕಳೆದ ಆರು ದಿನಗಳಿಂದ ನಿರಂತರ ಮಳೆ ಸುರಿಸುತ್ತಿದ್ದು, ಮಲೆನಾಡು ಮೂಡಿಗೆರೆ ಭಾಗದಲ್ಲೂ ಮಳೆ ಅಬ್ಬರ ಜೋರಾಗಿ ಮುಂದುವರಿದಿದೆ. ಸಂಜೆ 4 ಗಂಟೆಯಿಂದಲೂ ನಿರಂತರ ಮಳೆ ಸುರಿಯುತ್ತಿದೆ. ಬಿಟ್ಟೂ ಬಿಡದೇ ಸುರಿಯುವ ಮಳೆಯಿಂದಾಗಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಮೂಡಿಗೆರೆ ತಾಲೂಕಿನ ಜಾಣಿಗೆ, ಉದುಸೆ ಗ್ರಾಮದ ಸುತ್ತಮುತ್ತ ಭಾರಿ ಮಳೆ ಸುರಿಯುತ್ತಿದ್ದು, ಹಲವೆಡೆ ವಿದ್ಯುತ್ ಸಂಪರ್ಕ ಸ್ಥಗಿತವಾಗಿದೆ. ಇತ್ತ ಬಯಲು ಸೀಮೆ ಭಾಗವಾದ ರಾತ್ರಿಯಿಡಿ ಕಳಸಾಪುರ, ಬೆಳವಾಡಿ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ. ಚಿಕ್ಕಮಗಳೂರು ತಾಲೂಕಿನ ಬೆಳವಾಡಿ, ಕಳಸಾಪುರ ಗ್ರಾಮಗಳಲ್ಲಿ ಮಳೆ ಸುರಿಯುತ್ತಿರುವುದನ್ನು ನೋಡಿ ಜನರು ಸಂಭ್ರಮ ಪಡುತ್ತಿದ್ದಾರೆ.
ಇದನ್ನೂಓದಿ:ಬಿರು ಬೇಸಿಗೆಯಲ್ಲೂ ಗೋಕಾಕ್ ಫಾಲ್ಸ್‌ನಲ್ಲಿ ಜೀವಕಳೆ - Gokak Water Falls