ವಿಜಯಪುರ: ಮಳೆಗೆ ನೆಲಕಚ್ಚಿದ ಕಬ್ಬು, ಈರುಳ್ಳಿ; ಸಾಲ ಮಾಡಿ ಬೆಳೆ ಬೆಳೆದ ರೈತ ಕಂಗಾಲು - Vijayapura Rain
Published : Oct 6, 2024, 1:31 PM IST
ವಿಜಯಪುರ: ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಆಳೆತ್ತರ ಬೆಳೆದಿದ್ದ ಕಬ್ಬು ನೆಲಕಚ್ಚಿದೆ. ಈರುಳ್ಳಿ ಕೆಸರಿನಲ್ಲಿ ಸಿಕ್ಕು ಹಾನಿಗೊಂಡಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ರೈತರು ಕಂಗಾಲಾಗಿದ್ದಾರೆ. ಜುಮನಾಳ ಗ್ರಾಮದಲ್ಲಿ ವರುಣಾರ್ಭಟಕ್ಕೆ ರೈತ ಅಶೋಕ್ ಬ್ಯಾಕೋಡ ಎಂಬವರ ಬೆಳೆಗಳು ನಾಶವಾಗಿವೆ.
ಗ್ರಾಮದ ಸುತ್ತಮುತ್ತ ಹಲವು ಎಕರೆ ಪ್ರದೇಶದಲ್ಲಿ ಅತಿಯಾದ ಮಳೆಯಿಂದ ಸಾಲ ಮಾಡಿ ಬೆಳೆದ ರೈತರ ಬೆಳೆಗಳು ಹಾನಿಗೊಳಗಾಗಿವೆ. ಜಮೀನುಗಳು ನೀರು ನಿಂತು ಕೆಸರು ಗದ್ದೆಯಂತಾಗಿವೆ. ಬೆಳೆಹಾನಿಗೆ ಸರ್ಕಾರ ಸೂಕ್ತ ಪರಿಹಾರ ಕೊಡಬೇಕೆಂದು ರೈತರು ಒತ್ತಾಯಿಸುತ್ತಿದ್ದಾರೆ. ಬೆಳೆ ಹಾನಿ ಸರ್ವೆ ಅಧಿಕಾರಿಗಳು ಹಾನಿಗೊಂಡ ಜಮೀನಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಜ್ಯದ ಹಲವೆಡೆ ಭಾರಿ ಮಳೆ: ಇನ್ನು ನಿನ್ನೆ ರಾಜ್ಯದ ಹಲವೆಡೆ ಮಳೆಯಾಗಿದ್ದು ಕೆಲವೆಡೆ ಜನಜೀವನ ಅಸ್ತವ್ಯಸ್ತವಾಗಿತ್ತು. ಬಳ್ಳಾರಿಯಲ್ಲಿ 4 ಗಂಟೆ ಸುರಿದ ಮಳೆಗೆ ಗಣಿ ಪ್ರದೇಶದಲ್ಲಿ ನಿಲ್ಲಿಸಿದ್ದ ಲಾರಿಗಳು ಜಲಾವೃತಗೊಂಡವು. ಚಿಕ್ಕಮಗಳೂರಿನಲ್ಲಿ ಅಡಿಕೆ ತೋಟಗಳು ಜಲಾವೃತಗೊಂಡಿವೆ. ಬೆಂಗಳೂರಿನಲ್ಲಿ ಅಪಾರ್ಟ್ಮೆಂಟ್ನಲ್ಲಿ ನೀರು ತುಂಬಿ ಜನರು ಹೊರಬರಲಾಗದೆ ಸಂಕಷ್ಟ ಅನುಭವಿಸಿದರು.
ಇದನ್ನೂ ಓದಿ: ಶೃಂಗೇರಿ ತಾಲೂಕಿನಾದ್ಯಂತ ಭಾರೀ ಮಳೆ: ವಿಡಿಯೋ - Heavy Rain in Sringeri