10 ವರ್ಷದ ಹಿಂದೆ ಕಸದ ಬುಟ್ಟಿಯಲ್ಲಿ ಬಿದ್ದಿದ್ದ ವರದಿಯನ್ನು ಈಗ ಸರ್ಕಾರಕ್ಕೆ ಸಲ್ಲಿಸಿದ್ದಾರೆ: ಶಾಮನೂರು ಶಿವಶಂಕರಪ್ಪ
Published : Mar 2, 2024, 3:54 PM IST
ದಾವಣಗೆರೆ: "ಹತ್ತು ವರ್ಷದ ಹಿಂದೆ ಕಸದ ಬುಟ್ಟಿಯಲ್ಲಿ ಬಿದ್ದಿದ್ದ ಜಾತಿ ಜನಗಣತಿ ವರದಿಯನ್ನು ಈಗ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಒಂಬತ್ತು ವರ್ಷಗಳ ಕೆಳಗೆ ವರದಿಯನ್ನು ಕಾಂತರಾಜು ಬರೆದಿದ್ದಾರೋ ಅಥವಾ ಜಯಪ್ರಕಾಶ್ ಹೆಗ್ಡೆ ಬರೆದಿದ್ದಾರೋ ಹೇಳುತ್ತೀರಾ?, ಅದನ್ನು ಯಾರು ಬರೆದಿದ್ದಾರೋ ಗೊತ್ತಿಲ್ಲ" ಎಂದು ಹಿರಿಯ ಕಾಂಗ್ರೆಸ್ ಶಾಸಕ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
"ಮುಂದಿನ ನಡೆ ಬಗ್ಗೆ ಯೋಚನೆ ಮಾಡುತ್ತಿದ್ದೇವೆ. ವೀರಶೈವ ಲಿಂಗಾಯತ ಮಹಾಸಭಾದಿಂದಲೇ ಜನಗಣತಿ ಮಾಡಿಸುವ ಬಗ್ಗೆ ಯೋಚನೆ ಮಾಡುತ್ತಿದ್ದೇವೆ. ನಮ್ಮ ಬಳಿ ಸಿಬ್ಬಂದಿಗಳು ಹಾಗೂ ಹಣ ಇದೆ, ಜಾತಿ ಗಣತಿ ಮಾಡುತ್ತೇವೆ. ಈಗ ಸಲ್ಲಿಕೆಯಾಗಿರುವ ವರದಿಯನ್ನು ಬಿಡುಗಡೆ ಮಾಡಿದರೆ ಹೋರಾಟ ಮಾಡುತ್ತೇವೆ. ಒಕ್ಕಲಿಗರು, ಬ್ರಾಹ್ಮಣರು ಮತ್ತು ಲಿಂಗಾಯತರು ಸೇರಿ ಹೋರಾಟ ಮಾಡುತ್ತೇವೆ" ಎಂದು ತಮ್ಮದೇ ಸರ್ಕಾರಕ್ಕೆ ಶಾಮನೂರು ಎಚ್ಚರಿಕೆಯ ಸಂದೇಶ ರವಾನಿಸಿದರು.
ಜಾತಿ ಜನಗಣತಿ ವರದಿಗೆ ರಾಜ್ಯ ಒಕ್ಕಲಿಗರ ಹೋರಾಟ ಸಮಿತಿ ವಿರೋಧ: ಶುಕ್ರವಾರ ಬೆಂಗಳೂರಿನಲ್ಲಿ ಮಾತನಾಡಿದ್ದ ರಾಜ್ಯ ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಬಿ. ಕೆಂಚಪ್ಪಗೌಡ ಅವರು, ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆ ಅವರು, ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಿದ ಕಾಂತರಾಜು ಆಯೋಗದ ವರದಿಯನ್ನು ರಾಜ್ಯ ಒಕ್ಕಲಿಗರ ಹೋರಾಟ ಸಮಿತಿ ವಿರೋಧಿಸುತ್ತದೆ ಎಂದು ಹೇಳಿದ್ದರು.
ಇದನ್ನೂ ಓದಿ: ಜಾತಿಗಣತಿ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಮುಂದಿನ ತೀರ್ಮಾನ: ಸಿಎಂ ಸಿದ್ದರಾಮಯ್ಯ