ಸಾಂಸ್ಕೃತಿಕ ನಗರಿಯಲ್ಲಿ ಶಿವರಾತ್ರಿ ಸಂಭ್ರಮ: ಕುಟುಂಬ ಸಮೇತ ತ್ರಿನೇಶ್ವರನ ದರ್ಶನ ಪಡೆದ ಯದುವೀರ್
Published : Mar 8, 2024, 9:00 PM IST
ಮೈಸೂರು: ದೇಶಾದ್ಯಂತ ಮಹಾಶಿವರಾತ್ರಿ ಸಂಭ್ರಮ ಮನೆ ಮಾಡಿದೆ. ಮತ್ತೊಂದೆಡೆ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು ಬೆಳ್ಳಗೆಯಿಂದಲೇ ಶಿವನ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದವು. ವಿಶೇಷವಾಗಿ ಅರಮನೆ ಆವರಣದಲ್ಲಿರುವ ತ್ರಿನೇಶ್ವರ ಸ್ವಾಮಿಗೆ ಚಿನ್ನದ ಮುಖವಾಡ ಧಾರಣೆ ಮಾಡಲಾಗಿದ್ದು, ಭಕ್ತರು ಸಾಗರೋಪಾದಿಯಲ್ಲಿ ದೇವಸ್ಥಾನಕ್ಕೆ ಆಗಮಿಸಿ ಶಿವನ ದರ್ಶನ ಪಡೆದರು. ಬೆಳ್ಳಗೆ ಮೂಲ ತ್ರಿನೇಶ್ವರಗೆ ವಿಶೇಷ ಪೂಜೆ ಹೋಮ, ರುದ್ರಾಭಿಷೇಕ ನೆರವೇರಿಸಲಾಯಿತು.
ಕುಟುಂಬ ಸಮೇತ ತ್ರಿನೇಶ್ವರನ ದರ್ಶನ ಪಡೆದ ಯದುವೀರ್: ತ್ರಿನೇಶ್ವರಸ್ವಾಮಿ ದೇವಾಲಯಕ್ಕೆ ಶಿವರಾತ್ರಿ ಹಿನ್ನೆಲೆಯಲ್ಲಿ ಮೈಸೂರಿನ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಪತ್ನಿ ತ್ರಿಷಿಕಾ ಒಡೆಯರ್, ಪುತ್ರ ಆದ್ಯವೀರ್ ಆಗಮಿಸಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ, ದೇವಾಲಯದ ಆವರಣದಲ್ಲಿರುವ ಶಿವಲಿಂಗಕ್ಕೂ ಪೂಜೆ ಸಲ್ಲಿಸಿದರು.
ತ್ರಿನೇಶ್ವರನಿಗೆ ಧಾರಣೆ ಮಾಡಿದ ಚಿನ್ನದ ಮುಖವಾಡ ಕಣ್ತುಂಬಿಕೊಳ್ಳಲು ದೇವಾಲಯಕ್ಕೆ ಭಕ್ತರ ದಂಡು: ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಇಂದು ಬೆಳ್ಳಗೆ ತ್ರಿನೇಶ್ವರ ಸ್ವಾಮಿಯ ಮೂಲ ಮೂರ್ತಿಗೆ ಗುರುವಾರ ಜಿಲ್ಲಾ ಖಜಾನೆಯಿಂದ ತರಲಾಗಿದ್ದ 11 ಕೆ.ಜಿ. ತೂಕದ ಚಿನ್ನದ ಮುಖವಾಡವನ್ನು ಧಾರಣೆ ಮಾಡಲಾಯಿತು. ಇದನ್ನು ನೋಡಲು ಹಾಗೂ ವಿಶೇಷ ಪೂಜೆ ಸಲ್ಲಿಸಲು ಭಕ್ತರ ದಂಡು ದೇವಾಲಯಕ್ಕೆ ಆಗಮಿಸಿತು.
ಇದನ್ನೂ ಓದಿ: ಮುರುಡೇಶ್ವರದಲ್ಲಿ ಶಿವರಾತ್ರಿ ಸಂಭ್ರಮ: ಶಿವ ದರ್ಶನ ಪಡೆದ ಸಾವಿರಾರು ಭಕ್ತರು