ಬೆಂಗಳೂರು : ಸಿರಿಂಜ್ ಹಾಗೂ ಮಾತ್ರೆಗಳ ರೂಪದಲ್ಲಿ ನಗರದ ಹಲವು ಮೆಡಿಕಲ್ ಶಾಪ್ಗಳಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದು, ಈ ಸಂಬಂಧ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಹಿಳೆಯೊಬ್ಬರು ವಿಡಿಯೋ ಮಾಡಿ ಆಗ್ರಹಿಸಿದ್ದಾರೆ.
ಸಿರಿಂಜ್ ಹಾಗೂ ಮಾತ್ರೆ ರೂಪದಲ್ಲಿ ಮೆಡಿಕಲ್ ಸ್ಟೋರ್ಗಳಲ್ಲಿ ಡ್ರಗ್ಸ್ ಮಾರಾಟ ಮಾಡಲಾಗುತ್ತಿದೆ. ಯುವ ಸಮೂಹವು ಮತ್ತು ಬರುವ ಔಷಧ ಸೇವನೆ ದುಶ್ಚಟಗಳಿಗೆ ಅಂಟಿಕೊಳ್ಳುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಾದ ಪೊಲೀಸರು ಹಣ ಪಡೆದು ಸುಮ್ಮನಾಗುತ್ತಿದ್ದಾರೆ ಎಂದು ವಿಡಿಯೋದಲ್ಲಿ ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರ ಆಗ್ನೇಯ ವಿಭಾಗದ ಗುರಪ್ಪನಪಾಳ್ಯ, ಯಾರಬ್ ನಗರ, ಬಿಸ್ಮಿಲಾ ನಗರ, ಸಿದ್ದಾಪುರ ಹಾಗೂ ತಿಲಕ್ ನಗರ ಸೇರಿದಂತೆ ಸುತ್ತಮುತ್ತಲಿನ ಶಾಪ್ಗಳಲ್ಲಿ ನಶೆಯೇರಿಸುವ ಮಾತ್ರೆಗಳನ್ನ ಮಾರಾಟ ಮಾಡುತ್ತಿದ್ದರೂ ಅಕ್ರಮದಲ್ಲಿ ತೊಡಗಿಸಿಕೊಂಡ ಮಾಲೀಕರಿಂದ ಹಣ ಪಡೆದು, ಪೊಲೀಸರು ಬಿಟ್ಟು ಕಳುಹಿಸುತ್ತಿದ್ದಾರೆ ಎಂದು ಮಹಿಳೆ ಗಂಭೀರವಾಗಿ ಆರೋಪಿಸಿದ್ದಾರೆ.
ವಿಡಿಯೊ ವೈರಲ್ ಆಗುತ್ತಿದ್ದಂತೆ ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕ ರಾಮಮೂರ್ತಿ ಅವರು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಮಹಿಳೆ ವಿಡಿಯೊ ಬಗ್ಗೆ ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ಪ್ರತಿಕ್ರಿಯಿಸಿದ್ದು, 'ಮಹಿಳೆಯು ಸಿದ್ದಾಪುರ ಮೂಲದವರಾಗಿದ್ದು, ಅವರನ್ನ ಸಂಪರ್ಕಿಸಿ ಮಾಹಿತಿ ನೀಡುವಂತೆ ಕೇಳಲಾಗಿದೆ. ಅವರು ನೀಡುವ ಮಾಹಿತಿ ಆಧರಿಸಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು' ಎಂದಿದ್ದಾರೆ.
ಇದನ್ನೂ ಓದಿ : ಬೆಂಗಳೂರು: ಫಾರಿನ್ ಪೋಸ್ಟ್ ಆಫೀಸ್‌ನಲ್ಲಿ ₹21.17 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ