ಯಲ್ಲಾಪುರ: ಮನೆ ಅಂಗಳಕ್ಕೆ ಬಂದು ಹುಡುಕಾಡಿದ ಚಿರತೆ - ಸಿಸಿಟಿವಿ ವಿಡಿಯೋ - Leopard In Home Yard - LEOPARD IN HOME YARD
Published : Jul 13, 2024, 1:19 PM IST
ಕಾರವಾರ (ಉತ್ತರ ಕನ್ನಡ): ಚಿರತೆಯೊಂದು ರಾತ್ರಿ ವೇಳೆ ಮನೆ ಅಂಗಳಕ್ಕೆ ಬಂದು ಓಡಾಟ ನಡೆಸಿ ಆತಂಕ ಸೃಷ್ಟಿಸಿರುವ ಘಟನೆ ಯಲ್ಲಾಪುರದ ಮಂಚಿಕೇರಿ ಶಾಸ್ತ್ರಿಜಡ್ಡಿಯಲ್ಲಿ ನಡೆದಿದೆ. ಚಿರತೆಯ ಸಂಚರಿಸಿದ ದೃಶ್ಯವು ಮನೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಯಲ್ಲಾಪುರ ತಾಲೂಕಿನ ಮಂಚಿಕೇರಿ ಅರಣ್ಯ ವ್ಯಾಪ್ತಿಯ ಶಾಸ್ತ್ರಿಜಡ್ಡಿ ಗ್ರಾಮದ ನರಸಿಂಹ ಹೆಗಡೆ ಎಂಬವರ ಮನೆಯ ಅಂಗಳಕ್ಕೆ ಚಿರತೆ ಬೆಳಗಿನ ಜಾವದ ಸಂದರ್ಭದಲ್ಲಿ ಬಂದಿದೆ. ಓಡಾಟ ನಡೆಸಿದ ಚಿರತೆ, ಆಹಾರಕ್ಕಾಗಿ ಹುಡುಕಾಟ ನಡೆಸುತ್ತಿರುವಂತೆ ಕಂಡು ಬರುತ್ತಿದೆ. ಸಾಕುನಾಯಿಗಳನ್ನು ಬೇಟೆಯಾಡಲು ಹುಡುಕಾಡಿದಂತಿದೆ. ಕೊನೆಗೆ ಏನೂ ಸಿಗದೇ ಹಾಗೆಯೇ ತೆರಳಿದೆ. ಈ ಬಗ್ಗೆ ನರಸಿಂಹ ಹೆಗಡೆ ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಇಂತಹದ್ದೇ ಘಟನೆಯೊಂದರಲ್ಲಿ, ಮನೆಯಂಗಳದಲ್ಲಿದ್ದ ಎರಡು ನಾಯಿಗಳನ್ನು ಹೊತ್ತೊಯ್ಯಲು ಯತ್ನಿಸಿ ವಿಫಲವಾಗಿದ್ದ ಚಿರತೆ, ಮತ್ತೊಮ್ಮೆ ದಾಳಿ ನಡೆಸಿ ಒಂದು ನಾಯಿಯನ್ನು ಎಳೆದೊಯ್ದ ಘಟನೆ ಕಳೆದ ಫೆಬ್ರವರಿಯಲ್ಲಿ ಉತ್ತರ ಕನ್ನಡದ ಕುಮಟಾ ತಾಲೂಕಿನ ಹೊಲನಗದ್ದೆ ಗ್ರಾಮದಲ್ಲಿ ನಡೆದಿತ್ತು. ಚಿರತೆ ದಾಳಿಯ ದೃಶ್ಯಗಳು ಮನೆಯಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.