ಚಿಕ್ಕಮಗಳೂರಿನಲ್ಲಿ ಅಬ್ಬರಿಸಿದ ಮಳೆರಾಯ: ವಿಡಿಯೋ - chikkamagalure
Published : Mar 14, 2024, 10:21 PM IST
ಚಿಕ್ಕಮಗಳೂರು : ಕಾಫಿನಾಡಿನಲ್ಲಿ ಬಿಸಿಲಿನ ಬೇಗೆ ತುಂಬಾ ಜೋರಾಗಿದೆ. ಬಿಸಿಲಿನ ತಾಪಕ್ಕೆ ತೋಟ ಗದ್ದೆಗಳು ಒಣಗಿ ಹೋಗಿದ್ದು, ಭೂಮಿ ಬಿರುಕು ಬಿಡಲು ಪ್ರಾರಂಭವಾಗಿದೆ. ಈ ಮಧ್ಯೆ ಮಲೆನಾಡಿನ ಕೆಲ ಭಾಗದಲ್ಲಿ ವರುಣ ದೇವ ಕೃಪೆ ತೋರಿದ್ದು, ಕಾಫಿನಾಡಲ್ಲಿ ವರ್ಷದ ಮೊದಲ ಮಳೆ ಭರ್ಜರಿಯಾಗಿ ಸುರಿದಿದೆ.
ಕಾದ ಕಾವಲಿಯಂತಾಗಿದ್ದ ಭೂಮಿಗೆ ವರುಣ ದೇವ ತಂಪೆರೆದಿದ್ದು, ಒಂದೇ ಗಂಟೆ ಸಮಯದಲ್ಲಿ ಒಂದೂವರೆ ಇಂಚಿನಷ್ಟು ಮಳೆಯಾಗಿದೆ. ಮಳೆ ಕಂಡು ಹಳ್ಳಿಗರು, ಬೆಳೆಗಾರರು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಕೊಳಗಾವೆ ಗ್ರಾಮದಲ್ಲಿ ಭಾರಿ ಮಳೆ ಸುರಿದಿದೆ. ಮುತ್ತೋಡಿ ತಪ್ಪಲಿನ ಜಾಗರ ಹೋಬಳಿಯ ಕೊಳಗಾಮೆ ಗ್ರಾಮದ ಸುತ್ತಮುತ್ತ, ಮೇಲಿನ ಹುಲುವತ್ತಿ ಭಾಗದಲ್ಲಿ ಭಾರಿ ಮಳೆಯಾಗಿದೆ.
ಹಲವು ಹಳ್ಳಿಗಳಲ್ಲಿ 20-30-40 ಸೆನ್ಸ್ನಷ್ಟು ಮಳೆ ಸುರಿದಿದೆ. ಮಳೆಗಾಗಿ ರೈತರು, ಕಾಫಿ ಬೆಳೆಗಾರರು ಆಕಾಶವನ್ನು ನೋಡುತ್ತಿದ್ದರು. ಅಡಕೆ - ಕಾಫಿ - ಮೆಣಸು ಉಳಿಸಿಕೊಳ್ಳಲು ಬೆಳೆಗಾರರು ಪರದಾಟ ನಡೆಸಿದ ಬೆನ್ನಲ್ಲೇ ಮಳೆ ಕಂಡು ಮಲೆನಾಡಿಗರು ಸಂತಸ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಮುತ್ತೋಡಿ ಅರಣ್ಯ ಸಮೀಪದ ಗ್ರಾಮಗಳಲ್ಲೂ ಮಳೆ ಸುರಿದಿದೆ. ಈ ಭಾಗದ ಜನರು ಹಾಗೂ ರೈತರು, ಮಳೆಕಂಡು ನಿಟ್ಟುಸಿರು ಬಿಡುತ್ತಿದ್ದಾರೆ.
ಇದನ್ನೂ ಓದಿ : ಚಿಕ್ಕಮಗಳೂರು: ಅಕಾಲಿಕ ಮಳೆಗೆ ಕಾಫಿ ಬೆಳೆ ನಾಶ, ಬೆಳೆಗಾರರು ಕಂಗಾಲು