ಕಾರ್ಖಾನೆ ಬಾಗಿಲಿಗೆ ಮುಳ್ಳು ಹಾಕಿ, ಪೊರಕೆ ಹಿಡಿದು ರೈತರ ಪ್ರತಿಭಟನೆ
Published : Mar 15, 2024, 10:39 PM IST
ಮೈಸೂರು : ವರುಣಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಳಗಂಚಿ ಗ್ರಾಮದ ಬಣ್ಣಾರಿ ಅಮ್ಮಾನ್ ಸಕ್ಕರೆ ಕಾರ್ಖಾನೆ ಮುಂಭಾಗದಲ್ಲಿ ಭೂಮಿ ಕಳೆದುಕೊಂಡ ರೈತರ ಮಕ್ಕಳಿಗೆ ಖಾಯಂ ಉದ್ಯೋಗ ನೀಡುವಂತೆ ಆಗ್ರಹಿಸಿ, ರೈತರು ಪ್ರತಿಭಟನೆ ನಡೆಸಿದ್ದಾರೆ. ಕಾರ್ಖಾನೆಯ ಬಾಗಿಲಿಗೆ ಮುಳ್ಳು ಮುಚ್ಚಿ, ಮಹಿಳೆಯರು ಪೊರಕೆ ಹಿಡಿದು ಪ್ರತಿಭಟಿಸಿದ್ದಾರೆ.
ಕಾರ್ಖಾನೆ ನಿರ್ಮಾಣಕ್ಕಾಗಿ ಅಂದು, ಮಲ್ಲೂಪುರ, ಅಳಗಂಚಿಪುರ ರೈತರಿಂದ ಕೇವಲ 26 ಸಾವಿರ ರೂಪಾಯಿಗಳಿಗೆ ಭೂಮಿ ಪಡೆದ ಕೆಐಎಡಿಬಿಯು, ರೈತ ಕುಟುಂಬಕ್ಕೆ ಖಾಯಂ ಉದ್ಯೋಗ ನೀಡುವುದಾಗಿ ಹೇಳಿ ಬಣ್ಣಾರಿ ಅಮ್ಮಾನ್ ಸಕ್ಕರೆ ಕಾರ್ಖಾನೆಗೆ ನೀಡಲಾಗಿದೆ.
ಕೆಲಸದ ಆಸೆಯಿಂದ ಭೂಮಿ ನೀಡಿದ ನಮಗೆ ಅಲ್ಲಿಂದ ಇಲ್ಲಿಯವರೆಗೂ ಯಾವೊಬ್ಬ ರೈತ ಕುಟುಂಬಕ್ಕೂ ಖಾಯಂ ಉದ್ಯೋಗ ನೀಡಿಲ್ಲ. ಬದಲಾಗಿ ಸಣ್ಣಪುಟ್ಟ ಗುತ್ತಿಗೆ ಆಧಾರದ ಕೆಲಸಗಳನ್ನು ನೀಡುತ್ತಾ ಬಂದಿದ್ದಾರೆ ಎಂದು ಆರೋಪಿಸಿದ್ದಾರೆ.
ಕ್ಷೇತ್ರದ ಶಾಸಕರಾದ ಸಿಎಂ ಸಿದ್ದರಾಮಯ್ಯ ಆಗಲಿ ಅಥವಾ ಕ್ಷೇತ್ರದ ಉಸ್ತುವಾರಿ ಹೊತ್ತಿರುವ ಪುತ್ರ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಆಗಲಿ ಅಥವಾ ಉನ್ನತ ಮಟ್ಟದ ಅಧಿಕಾರಿಗಳಾಗಲಿ ಸ್ಥಳಕ್ಕೆ ಬಂದು ತಮಗೆ ಮತ ನೀಡಿದ ಮತದಾರರಿಗೆ ನ್ಯಾಯ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ ಎಂದು ಪ್ರತಿಭಟನಾಕಾರರು ಕಿಡಿಕಾರಿದ್ದಾರೆ. ರೈತರ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕು, ಇಲ್ಲದಿದ್ದಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ : ಮಂಡ್ಯ: ಬತ್ತಿದ ಕೆರೆಕಟ್ಟೆ, ಬೋರ್ವೆಲ್, ಜಾನುವಾರುಗಳಿಗೆ ನೀರಿಲ್ಲದೆ ಪರದಾಟ