ಕುಂದಗೋಳದಲ್ಲಿ ಮಳೆಯಿಂದ ಮೆಣಸಿನಕಾಯಿ ಬೆಳೆ ಹಾನಿ: ಗಿಡಗಳನ್ನು ಕಿತ್ತು ಹಾಕಿದ ರೈತರು
Published : Oct 28, 2024, 8:08 PM IST
ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನಲ್ಲಿ ಮಳೆಯಿಂದಾಗಿ ಮೆಣಸಿನಕಾಯಿ ಬೆಳೆಗೆ ಹಾನಿಯಾಗಿದೆ. ಇದರಿಂದಾಗಿ ರೈತರು ತಮ್ಮ ಜಮೀನಿನಲ್ಲಿ ಬೆಳೆದಿದ್ದ ಮೆಣಸಿನ ಗಿಡಗಳನ್ನು ಕಿತ್ತು ಹಾಕಿದ್ದಾರೆ.
ರೈತ ಬಸವರಾಜ್ ಯೋಗಪ್ಪನವರ ಮಾತನಾಡಿ, "ಕುಂದಗೋಳ ತಾಲೂಕಿನ 6,500 ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ನಾಟಿ ಮಾಡಲಾಗಿದೆ. ಮಳೆಯಿಂದ ನೂರಾರು ಎಕರೆಯಲ್ಲಿ ಬೆಳೆದ ಬೆಳೆಗೆ ಹಾನಿಯಾಗಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆಯನ್ನು ರೈತರು ಕಿತ್ತು ಹಾಕಿದ್ದಾರೆ" ಎಂದರು.
"ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದ ರೈತರ ಜಮೀನುಗಳಿಗೆ ನರಕನಹಳ್ಳದ ನೀರು ನುಗ್ಗಿ ಬೆಳೆ ಹಾನಿಯಾಗಿದೆ. ಪ್ರತಿ ವರ್ಷವೂ ಬೆಳೆ ಹಾನಿಯಾಗುತ್ತಿದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಈ ಬಗ್ಗೆ ಗಮನಹರಿಸುತ್ತಿಲ್ಲ. ಕೇವಲ ಬೆಣ್ಣೆ ಹಳ್ಳದ ಬಗ್ಗೆ ಮಾತನಾಡುವ ಜನಪ್ರತಿನಿಧಿಗಳು, ನರಕನಹಳ್ಳದ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುವ ಕೆಲಸ ಮಾಡಬೇಕು. ಕೂಡಲೇ ಬೆಳೆ ಹಾನಿ ಸಮೀಕ್ಷೆ ಮಾಡಿ ಸೂಕ್ತ ಪರಿಹಾರ ನೀಡಬೇಕು. ಇಲ್ಲವಾದರೆ ವಿಧಾನಸೌಧದ ಎದುರು ಉಪವಾಸ ಕುಳಿತುಕೊಳ್ಳುತ್ತೇವೆ" ಎಂದು ಎಚ್ಚರಿಕೆ ನೀಡಿದರು.
ರೈತ ಮಹಿಳೆ ನಾಗಮ್ಮ ಮಾತನಾಡಿ, "ಹೆಚ್ಚು ಮಳೆಯಾಗಿ ಮೆಣಸಿನಕಾಯಿ ಬೆಳೆಗೆ ಹಾನಿಯಾಗಿದ್ದರಿಂದ ನಮಗೆ ಬಹಳ ನಷ್ಟವಾಗಿದೆ. ಎದೆ ಎತ್ತರಕ್ಕೆ ಬೆಳೆದ ಗಿಡಗಳು ಕೊಳೆತು ಹೋಗಿವೆ. ಗಿಡದಿಂದ ಮೆಣಸಿನಕಾಯಿಗಳು ಉದುರಿ ಬೀಳುತ್ತಿವೆ. ಸರ್ಕಾರ ಸೂಕ್ತ ಪರಿಹಾರ ನೀಡಬೇಕು" ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಧಾರವಾಡ ಜಿಲ್ಲೆಯಲ್ಲಿ ಹಿಂಗಾರು ಮಳೆ ಅಬ್ಬರ: ಈರುಳ್ಳಿ, ಶೇಂಗಾ, ಹತ್ತಿ ಬೆಳೆ ಮಣ್ಣುಪಾಲು