ಕಾಫಿನಾಡಿನಲ್ಲಿ ಕಾಡಾನೆ ಹಾವಳಿ: ಸಿಸಿಟಿವಿಯಲ್ಲಿ ಸೆರೆಯಾದ ಒಂಟಿ ಸಲಗ
Published : Feb 18, 2024, 9:07 AM IST
ಚಿಕ್ಕಮಗಳೂರು: ಈ ತಿಂಗಳ ಆರಂಭದಿಂದಲೂ ಕಾಫಿನಾಡಿನಲ್ಲಿ ಆನೆ ಬೀಟಮ್ಮ ಆ್ಯಂಡ್ ಗ್ಯಾಂಗ್ ಸದ್ದು ಮಾಡುತ್ತಿದೆ. ಕಾಡಾನೆ ಹಾವಳಿಗೆ ಇಂದಾವರ ಗ್ರಾಮಸ್ಥರು ಬೇಸತ್ತು ಹೋಗಿದ್ದಾರೆ. ಕಳೆದ ಎಂಟತ್ತು ದಿನಗಳಿಂದ ಇಂದಾವರ ಗ್ರಾಮದ ಸುತ್ತ ಮುತ್ತ ಕಾಡಾನೆಗಳು ಬೀಡು ಬಿಟ್ಟಿದ್ದು, ಅವುಗಳ ಸಂಚಾರ ಸಿ.ಸಿ ಟಿವಿಯಲ್ಲಿ ಸೆರೆಯಾಗಿದೆ.
ಕಾಫಿ ತೋಟ, ಮನೆಯ ಕಂಪೌಂಡ್ ಸೇರಿದಂತೆ ಹಲವು ವಸ್ತುಗಳನ್ನು ಸಂಪೂರ್ಣ ನಾಶ ಮಾಡಿವೆ. ಏಕಾಂಗಿಯಾಗಿ ಸಂಚಾರ ಮಾಡುತ್ತಿರುವ ಒಂಟಿ ಸಲಗದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಮನೆ ಬಿಟ್ಟು ರಸ್ತೆಗೆ ಬರಲು ಗ್ರಾಮಸ್ಥರು ಭಯ ಪಡುವಂತಾಗಿದೆ. ಈಗಾಗಲೇ ಸುಮಾರು ಎಂಟು ದಿನಗಳಿಂದ ತೋಟದ ಕೆಲಸಕ್ಕೆ ಕಾರ್ಮಿಕರು ಹೋಗಿಲ್ಲ.
ಕಳೆದ ಮೂರು ದಿನದ ಹಿಂದೆ ರಸ್ತೆ ತಡೆ ನಡೆಸಿ ಕಾಡಾನೆಗಳ ಸ್ಥಳಾಂತರಕ್ಕೆ ಗ್ರಾಮಸ್ಥರು ಪಟ್ಟು ಹಿಡಿದಿದ್ದರು. ಇದರ ಬೆನ್ನಲ್ಲೇ ಮತ್ತೆ ಗ್ರಾಮದ ಮನೆಯೊಂದರ ಮುಂದೆ ಒಂಟಿಸಲಗದ ಸಂಚಾರ ನಡೆದಿದೆ. ಇದನ್ನು ನೋಡಿದ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಕಾಫಿ ತೋಟದ ಬೇಲಿಯನ್ನು ಕ್ಷಣ ಮಾತ್ರದಲ್ಲಿ ಕಾಡಾನೆ ನಾಶ ಮಾಡಿದೆ. ಯಾವ ಕ್ಷಣದಲ್ಲಿ ಯಾವ ರಸ್ತೆಗೆ ಕಾಡಾನೆಗಳು ಬರುತ್ತವೆ ಎಂಬ ಭಯದಲ್ಲೇ ಚಿಕ್ಕಮಗಳೂರು ಹೊರ ವಲಯದ ಇಂದಾವರ ಗ್ರಾಮದ ಜನರು ಬದುಕುವಂತಾಗಿದೆ.
ಇದನ್ನೂ ಓದಿ: ಚಿಕ್ಕಮಗಳೂರು ಮಸಗಲಿ ಬೆಟ್ಟ ಹತ್ತಿದ 25 ಕಾಡಾನೆಗಳ ಬೀಟಮ್ಮ ಗ್ಯಾಂಗ್