ತಾಕತ್ತು ಧಮ್ಮು ಬಗ್ಗೆ ಯಾರಾದರು ಹೆಣ್ಣುಮಕ್ಕಳು ಮಾತಾಡುತ್ತಾರಾ: ಸಚಿವ ಬೈರತಿ ಸುರೇಶ್ - MUDA CASE
Published : Oct 28, 2024, 3:45 PM IST
ಬೆಂಗಳೂರು: ತಾಕತ್ತು ಧಮ್ಮು ಬಗ್ಗೆ ಯಾರಾದರೂ ಹೆಣ್ಣು ಮಕ್ಕಳು ಮಾತನಾಡ್ತಾರಾ ಎಂದು ಸಚಿವ ಬೈರತಿ ಸುರೇಶ್ ಅವರು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ತಿರುಗೇಟು ನೀಡಿದರು.
ಸೋಮವಾರ ವಿಧಾನಸೌಧದಲ್ಲಿ ಮಾತನಾಡಿದ ಅವರು, ತಾಕತ್ ಇದ್ದರೆ ನನ್ನ ವಿರುದ್ಧ ದಾಖಲೆ ಬಿಡುಗಡೆ ಮಾಡಲಿ ಎಂಬ ಶೋಭಾ ಕರಂದ್ಲಾಜೆ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ನಮ್ಮ ಸಂಸ್ಕೃತಿಯಲ್ಲಿ ಹೆಣ್ಣು ಮಕ್ಕಳು ಮಾತನಾಡುವ ಭಾಷೆ ಇದಲ್ಲ. ಹೆಣ್ಣು ಮಕ್ಕಳು ಮಾತನಾಡುವ ಭಾಷೆಯೇ ಬೇರೆ. ಸುಸಂಸ್ಕೃತ ಹೆಣ್ಣುಮಕ್ಕಳು ಎಂದರೆ ಕ್ಷಮಯಾಧರಿತ್ರಿ, ಭಾರತಾಂಬೆ ಎಂದು ಗೌರವ ಕೊಡುತ್ತೇವೆ. ಆದರೆ, ಅವರ ಬಾಯಲ್ಲಿ ಬರುವ ಮಾತಾ ಇದು?. ತಾಕತ್ತು ದಮ್ಮು ಅಂದರೆ ಏನು? ಸುಸಂಸ್ಕೃತವಾದ ಮಹಿಳೆಯರು ಈ ರೀತಿ ಮಾತನಾಡಿದರೆ ನಾನು ಉತ್ತರ ಕೊಡುತ್ತೇನೆ. ದೇಶದ ಹೆಣ್ಣು ಮಕ್ಕಳು ಹೆಂಗಿರಬೇಕು?. ಈ ರೀತಿ ಮಾತನಾಡುವುದು ಸರಿಯಲ್ಲ. ಅವರ ವಿರುದ್ಧದ ದಾಖಲೆ ಬಿಡುಗಡೆ ಮಾಡುತ್ತೇನೆ. ಅವರ ರೀತಿ ಮಾತನಾಡುವುದು ನನಗೆ ಗೊತ್ತಿಲ್ಲ ಎಂದರು.
ಬೆಳಗಾವಿಯಲ್ಲಿರುವ ಇಎಸ್‌ಐಸಿ ಆಸ್ಪತ್ರೆಗೆ ಭಾನುವಾರ ಭೇಟಿ ನೀಡಿದ ಬಳಿಕ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಬೈರತಿ ಸುರೇಶ್ ಅವರ ವಿರುದ್ಧ ಕೆಲವು ವಿಚಾರಗಳನ್ನು ಪ್ರಸ್ತಾಪಿಸುತ್ತ ತಾಕತ್ತಿದ್ದರೆ ನನ್ನ ಅಕ್ರಮದ ದಾಖಲೆ ಬಿಡುಗಡೆಗೊಳಿಸಿ ಎಂದು ಕಿಡಿಕಾರಿದ್ದರು.
ಇದನ್ನೂ ಓದಿ: ಮುಡಾ ಪ್ರಕರಣ: ಬೆಂಗಳೂರು, ಮೈಸೂರು ಸೇರಿ 9 ಕಡೆ ಇಡಿ ಅಧಿಕಾರಿಗಳಿಂದ ದಾಳಿ, ದಾಖಲೆ ಪರಿಶೀಲನೆ