ಚಲಿಸುತ್ತಿದ್ದ ರೈಲು ಇಂಜಿನ್ನಲ್ಲಿ ಕಾಣಿಸಿಕೊಂಡ ಬೆಂಕಿ - ವಿಡಿಯೋ - ರೈಲು ಇಂಜಿನ್ನಲ್ಲಿ ಬೆಂಕಿ
Published : Feb 23, 2024, 12:39 PM IST
ಧೆಂಕನಲ್ (ಒಡಿಶಾ): ಜಿಲ್ಲೆಯ ಜೋರಾಂಡಾ ರೋಡ್ ರೈಲು ನಿಲ್ದಾಣದ ಗೋಬಿಂದಪುರ ಬಳಿ ಚಲಿಸುತ್ತಿದ್ದ ರೈಲು ಇಂಜಿನ್ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡ ಘಟನೆ ಗುರುವಾರ ನಡೆದಿದೆ. ಬೆಂಕಿಗೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಇಂಜಿನ್ನಲ್ಲಿದ್ದ ಲೋಕೋ ಪೈಲಟ್ ಹೊರಡೆ ಜಿಗಿದಿದ್ದು, ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ. ರೈಲು ಇಂಜಿನ್ಗೆ ಬೆಂಕಿ ಹತ್ತಿ ಉರಿಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ವೈರಲ್ ಆಗುತ್ತಿದೆ.
ಬೋಗಿಗಳಿಲ್ಲದ ಈ ರೈಲಿನ ಇಂಜಿನ್ ಮಾತ್ರ ತಾಲ್ಚೆರ್ನಿಂದ ಕಟಕ್ಗೆ ತೆರಳುತ್ತಿದ್ದ ವೇಳೆ ಬೆಂಕಿ ಕಾಣಿಸಿಕೊಂಡಿದೆ. ಇಂಜಿನ್ಗೆ ಬೆಂಕಿ ಹೊತ್ತಿಕೊಂಡಿರುವ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ನಾಲ್ಕು ಅಗ್ನಿಶಾಮಕ ದಳದ ವಾಹನ ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸುವ ಕಾರ್ಯಾಚರಣೆ ಕೈಗೊಂಡಿದ್ದು, ಬೆಂಕಿ ನಿಯಂತ್ರಣಕ್ಕೆ ಬಂದಿದೆ. ಬೆಂಕಿ ಅವಘಡದಲ್ಲಿ ರೈಲಿನ ಮೇಲಿನ ವಿದ್ಯುತ್ ತಂತಿ ತುಂಡಾಗಿದೆ. ಇದರಿಂದಾಗಿ ಪೂರ್ವ ಕರಾವಳಿ ರೈಲ್ವೆಯಲ್ಲಿನ ಎಲ್ಲಾ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಧೆಂಕನಲ್ ಅಗ್ನಿಶಾಮಕ ಅಧಿಕಾರಿ ಪ್ರಶಾಂತ್ ಧಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದನ್ನೂ ನೋಡಿ: ಗಂಗೊಂಡನಹಳ್ಳಿ ಶೆಡ್ನಲ್ಲಿ ಅಗ್ನಿ ಅವಘಡ: 30ಕ್ಕೂ ಅಧಿಕ ಆಟೋಗಳು ಬೆಂಕಿಗಾಹುತಿ