ವಾಷಿಂಗ್ಟನ್, ಅಮೆರಿಕ : ರಷ್ಯಾದ ಸೈಬರ್ ಸೆಕ್ಯುರಿಟಿ ಕಂಪನಿ ಕ್ಯಾಸ್ಪರ್ಸ್ಕಿ ಲ್ಯಾಬ್ನ 12 ಹಿರಿಯ ಅಧಿಕಾರಿಗಳ ವಿರುದ್ಧ ಅಮೆರಿಕದ ಖಜಾನೆ ಇಲಾಖೆ ನಿರ್ಬಂಧಗಳನ್ನು ಘೋಷಿಸಿದೆ. ದೇಶದ ವಾಣಿಜ್ಯ ಇಲಾಖೆಯು ಅಮೆರಿಕದಲ್ಲಿ ಕ್ಯಾಸ್ಪರ್ಸ್ಕಿಯ ಆಂಟಿವೈರಸ್ ಸಾಫ್ಟ್ವೇರ್ಗಳ ಮಾರಾಟವನ್ನು ನಿಷೇಧಿಸಿದ ಒಂದು ದಿನದ ನಂತರ ಅದರ ಹಿರಿಯ ಅಧಿಕಾರಿಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ.
"ನಮ್ಮ ಸೈಬರ್ ಕ್ಷೇತ್ರದ ಸಮಗ್ರತೆಯನ್ನು ರಕ್ಷಿಸಲು ಮತ್ತು ದುರುದ್ದೇಶಪೂರಿತ ಸೈಬರ್ ಬೆದರಿಕೆಗಳಿಂದ ನಾಗರಿಕರನ್ನು ರಕ್ಷಿಸುವ ನಮ್ಮ ಬದ್ಧತೆಗೆ ಅನುಗುಣವಾಗಿ ಕ್ಯಾಸ್ಪರ್ಸ್ಕಿ ಲ್ಯಾಬ್ನ ಹಿರಿಯ ಅಧಿಕಾರಿಗಳ ವಿರುದ್ಧ ನಿರ್ಬಂಧಕ ಕ್ರಮಗಳನ್ನು ಕೈಗೊಳ್ಳಲಾಗಿದೆ" ಎಂದು ಭಯೋತ್ಪಾದನೆ ಮತ್ತು ಹಣಕಾಸು ಗುಪ್ತಚರ ಖಜಾನೆ ಅಧೀನ ಕಾರ್ಯದರ್ಶಿ ಬ್ರಿಯಾನ್ ನೆಲ್ಸನ್ ಶುಕ್ರವಾರ ಹೇಳಿದರು. ನಿರ್ಬಂಧಕ್ಕೊಳಗಾದ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೇರಿದಂತೆ 12 ಕ್ಯಾಸ್ಪರ್ಸ್ಕಿ ಅಧಿಕಾರಿಗಳ ಹೆಸರುಗಳನ್ನು ಅವರು ಇದೇ ಸಂದರ್ಭದಲ್ಲಿ ಬಹಿರಂಗಪಡಿಸಿದರು.
"ಇಂಥ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡಲು ಪ್ರಯತ್ನಿಸುವ ಅಥವಾ ಅಂಥ ಚಟುವಟಿಕೆಗಳನ್ನು ನಡೆಸುವ ಯಾರೇ ಆದರೂ ಅವರ ವಿರುದ್ಧ ಯುಎಸ್ ಕ್ರಮ ತೆಗೆದುಕೊಳ್ಳುತ್ತದೆ" ಎಂದು ನೆಲ್ಸನ್ ಹೇಳಿದರು.
"ಕ್ಯಾಸ್ಪರ್ಸ್ಕಿ ರಷ್ಯಾ ಸರ್ಕಾರದ ನ್ಯಾಯಾಂಗ, ನಿಯಂತ್ರಣ ಅಥವಾ ನಿರ್ದೇಶನಕ್ಕೆ ಒಳಪಟ್ಟಿರುವ ಕಂಪನಿಯಾಗಿದೆ. ಇದು ಅಮೆರಿಕ ನಾಗರಿಕರ ವೈಯಕ್ತಿಕ ಮಾಹಿತಿ ಸೇರಿದಂತೆ ಸೂಕ್ಷ್ಮ ಮಾಹಿತಿಗಳನ್ನು ಕದಿಯಲು ತನ್ನ ಅಸ್ತಿತ್ವವನ್ನು ಬಳಸಿಕೊಳ್ಳಬಹುದು ಅಥವಾ ಸೈಬರ್ ಭದ್ರತಾ ಕ್ರಮಗಳನ್ನು ಬೈಪಾಸ್ ಮಾಡಬಹುದು. ಆ ಮೂಲಕ ಅಮೆರಿಕದ ರಾಷ್ಟ್ರೀಯ ಭದ್ರತೆ ಅಥವಾ ಅಮೆರಿಕದ ವ್ಯಕ್ತಿಗಳ ಸುರಕ್ಷತೆ ಮತ್ತು ಭದ್ರತೆಗೆ ಅಪಾಯವನ್ನುಂಟು ಮಾಡಬಹುದು" ಎಂದು ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರ ಮ್ಯಾಥ್ಯೂ ಮಿಲ್ಲರ್ ಹೇಳಿದರು.
"ಕ್ಯಾಸ್ಪರ್ಸ್ಕಿ ಇನ್ನು ಮುಂದೆ ತನ್ನ ಸಾಮಾನ್ಯ ಚಟುವಟಿಕೆಗಳನ್ನು ನಡೆಸಲು ಸಾಧ್ಯವಾಗುವುದಿಲ್ಲ ಮಾತ್ರವಲ್ಲದೇ, ಅಮೆರಿಕದ ಒಳಗೆ ತನ್ನ ಸಾಫ್ಟ್ವೇರ್ ಅನ್ನು ಮಾರಾಟ ಮಾಡಲು ಅಥವಾ ಈಗಾಗಲೇ ಬಳಕೆಯಲ್ಲಿರುವ ಸಾಫ್ಟ್ವೇರ್ಗಳಿಗೆ ಅಪ್ಡೇಟ್ಗಳನ್ನು ಒದಗಿಸಲು ಸಾಧ್ಯವಾಗುವುದಿಲ್ಲ" ಎಂದು ವಾಣಿಜ್ಯ ಇಲಾಖೆಯ ಬ್ಯೂರೋ ಆಫ್ ಇಂಡಸ್ಟ್ರಿ ಅಂಡ್ ಸೆಕ್ಯುರಿಟಿ ಹೇಳಿಕೆಯಲ್ಲಿ ತಿಳಿಸಿದೆ.
ಅಮೆರಿಕದ ಸೂಕ್ಷ್ಮ ಮಾಹಿತಿಯನ್ನು ಸಂಗ್ರಹಿಸಲು ಕ್ಯಾಸ್ಪರ್ಸ್ಕಿ ಲ್ಯಾಬ್ನಂಥ ಕಂಪನಿಗಳಿಗೆ ರಷ್ಯಾ ಕುಮ್ಮಕ್ಕು ನೀಡುತ್ತಿರುವುದು ಮಾತ್ರವಲ್ಲದೆ, ಪದೇ ಪದೆ ಅಂಥ ಚಟುವಟಿಕೆಗಳನ್ನು ನಡೆಸುವ ದುರುದ್ದೇಶದ ವರ್ತನೆಗಳನ್ನು ತೋರಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ ಇಲಾಖೆಯು ಮೊದಲ ಬಾರಿಗೆ ಇಂಥ ಕ್ರಮಗಳನ್ನು ಕೈಗೊಂಡಿದೆ ವಾಣಿಜ್ಯ ಕಾರ್ಯದರ್ಶಿ ಗಿನಾ ರೈಮೊಂಡೊ ಹೇಳಿದ್ದಾರೆ.
ಇದನ್ನೂ ಓದಿ : ಭಾರತದಲ್ಲಿ 3600ಕ್ಕೇರಿದ ಡೀಪ್ಟೆಕ್ ಸ್ಟಾರ್ಟ್ಅಪ್ಗಳ ಸಂಖ್ಯೆ: ವಿಶ್ವದಲ್ಲಿ 6ನೇ ಸ್ಥಾನ - Deeptech Startups