ನವದೆಹಲಿ: ಭಾರತದಲ್ಲಿ ಉತ್ಪಾದನಾ ಘಟಕ ಆರಂಭಿಸಲಿರುವ ಹಿನ್ನೆಲೆಯಲ್ಲಿ ಟೆಸ್ಲಾ ಕಂಪೆನಿ ಸಂಸ್ಥಾಪಕ ಎಲೋನ್ ಮಸ್ಕ್ ಇನ್ನೆರಡು ದಿನದಲ್ಲಿ ಭಾರತಕ್ಕೆ ಆಗಮಿಸಲಿದ್ದಾರೆ. ಟೆಸ್ಲಾ ಎಲೆಕ್ಟ್ರಿಕ್ ವಾಹನ (ಇವಿ) ಘಟಕ ಪ್ರವೇಶದಿಂದ ದೇಶದಲ್ಲಿ ಮೂಲಸೌಕರ್ಯಾಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಯಾಗಲಿದೆ ಎಂದು ಅಂದಾಜಿಸಲಾಗಿದೆ.
ಪ್ರಧಾನಿ ಮೋದಿ ಅವರೊಂದಿಗೆ ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ಸಿಇಒ ಎಲೋನ್ ಮಸ್ಕ್ 2ರಿಂದ 3 ಬಿಲಿಯನ್ ಡಾಲರ್ ಮೌಲ್ಯದ ಹೂಡಿಕೆ ಕುರಿತು ಮಾತುಕತೆ ನಡೆಸಲಿದ್ದಾರೆ. ಈ ವೇಳೆ ಮಸ್ಕ್ ಅವರ ಕೈಗೆಟುಕುವ ದರದ ಸಾಟಲೈಟ್ ಇಂಟರ್ನೆಟ್ ಸೇವೆ ಸ್ಟಾರ್ಲಿಂಕ್ ಪ್ರವೇಶವನ್ನು ಘೋಷಿಸುವ ಸಾಧ್ಯತೆ ಇದೆ.
ಟೆಸ್ಲಾ ಪ್ರವೇಶವು ದೇಶಿಯ ಇವಿ ಉದ್ಯಮದಲ್ಲಿ ಹಲವು ಅವಕಾಶಗಳನ್ನು ಒದಗಿಸಲಿದೆ ಎಂದು ಇವಿ ಚಾರ್ಜಿಂಗ್ ಮೂಲಸೌಕರ್ಯ ಒದಗಿಸುವ ಸ್ಟಟಿಕ್ನ ಸಿಇಒ ಮತ್ತು ಸಂಸ್ಥಾಪಕರಾದ ಅಕ್ಷಿತ್ ಬನ್ಸಾಲ್ ತಿಳಿಸಿದ್ದಾರೆ. ಭಾರತದಲ್ಲಿ ಟೆಸ್ಲಾ ಘಟಕ ಸ್ಥಾಪನೆಯು ಟೆಕ್ ಒಲವು ಹೊಂದಿರುವ ಗ್ರಾಹಕರನ್ನು ಸೆಳೆಯಲಿದೆ. ಇದರ ಜೊತೆಗೆ ಸುಸ್ಥಿರ ಸಾರಿಗೆ ಪರಿಹಾರವೂ ಹೆಚ್ಚಲಿದೆ ಎಂದು ಅವರು ವಿವರಿಸಿದರು.