First Private Spacewalk: ಭೂಮಿಯ ಸುತ್ತ ಸುತ್ತುತ್ತಿರುವ ಸ್ಪೇಸ್‌ಎಕ್ಸ್ ಕ್ಯಾಪ್ಸುಲ್‌ನಿಂದ ಇಬ್ಬರು ಗಗನಯಾತ್ರಿಗಳು ಗುರುವಾರ ಮೊದಲ ಖಾಸಗಿ ಬಾಹ್ಯಾಕಾಶ ನಡಿಗೆ ನಡೆಸಿದರು. 41 ವರ್ಷದ ಬಿಲಿಯನೇರ್, ಟೆಕ್ ಉದ್ಯಮಿ ಜೇರೆಡ್ ಐಸಾಕ್‌ಮನ್ ಇಂದು ಬೆಳಗ್ಗೆ ಸುಮಾರು 6.52 ಗಂಟೆಗೆ ಬಾಹ್ಯಾಕಾಶ ನೌಕೆಯಿಂದ ಹೊರ ಬಂದು ಬಾಹ್ಯಾಕಾಶ ಯಾನ ಮಾಡಿದ ಮೊದಲಿಗರು. ಇವರ ಬಳಿಕ 30 ವರ್ಷದ ಸ್ಪೇಸ್‌ಎಕ್ಸ್ ಇಂಜಿನಿಯರ್ ಸಾರಾ ಗಿಲ್ಲಿಸ್ ಹೊರ ಬಂದರು. ಇವರಿಬ್ಬರ ಬಾಹ್ಯಾಕಾಶದಲ್ಲಿ ನಡಿಗೆ ನಡೆಸಿದ ಮೊದಲ ಸರ್ಕಾರೇತರ ವ್ಯಕ್ತಿಗಳಾಗಿದ್ದಾರೆ. ಇನ್ನಿಬ್ಬರು ಸಿಬ್ಬಂದಿ ಕ್ಯಾಪ್ಸುಲ್‌ನ ಒಳಗಿನಿಂದಲೇ ಈ ಎಲ್ಲ ಚಟುವಟಿಕೆಗಳನ್ನು ಗಮನಿಸಿದರು.
ಹೊಸ ಸ್ಪೇಸ್ಸೂಟ್ ನೊಂದಿಗೆ ಮೊದಲ ಖಾಸಗಿ ಬಾಹ್ಯಾಕಾಶ ನಡಿಗೆ:ಕ್ಯಾಪ್ಸುಲ್‌ನ ಹ್ಯಾಚ್ ಅನ್ನು ತೆರೆಯುವ ಮೊದಲು ಐಸಾಕ್ಮನ್ ಮತ್ತು ಅವರ ಸಿಬ್ಬಂದಿ ಗಾಳಿಯ ಒತ್ತಡ ಕಡಿಮೆಯಾಗುವವರೆಗೆ ಕಾಯುತ್ತಿದ್ದರು. ಈ ಹಿಂದೆ ಬಾಹ್ಯಾಕಾಶದಲ್ಲಿ ನಡೆದಾಡಿದ ಗಗನಯಾತ್ರಿಗಳ ಗಣ್ಯರ ಗುಂಪಿಗೆ ಸೇರಲು ಬಯಸುವುದಾಗಿ ಐಸಾಕ್‌ಮನ್ ನಿರ್ಗಮನದ ಮೊದಲು ವಿಶ್ವಾಸ ವ್ಯಕ್ತಪಡಿಸಿದ್ದರು. ಈ ಎಲ್ಲ ನಾಲ್ಕು ಸದಸ್ಯರು ನಿರ್ವಾತದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸ್ಪೇಸ್‌ಎಕ್ಸ್‌ನ ಹೊಸ ಬಾಹ್ಯಾಕಾಶ ವಾಕಿಂಗ್ ಸೂಟ್‌ಗಳನ್ನು ಧರಿಸಿದ್ದರು. ಈ ಬಾಹ್ಯಾಕಾಶ ಯಾನದ ಮೊದಲು ನಾಲ್ಕು ಸದಸ್ಯರಿಗೆ ತೀವ್ರ ತರಬೇತಿ ನೀಡಲಾಗಿತ್ತು. ಹೊಸ ಸ್ಪೇಸ್‌ಸೂಟ್‌ನೊಂದಿಗೆ ಬಾಹ್ಯಾಕಾಶದಲ್ಲಿ ನಡೆಯುವುದು ಬಹಳ ಅಪಾಯಕಾರಿಯಾಗಿತ್ತು.
ಈ ಕಾರ್ಯಾಚರಣೆಯಲ್ಲಿ ಬಾಹ್ಯಾಕಾಶ ನಡಿಗೆಗೆ ಹೋದ ಇಬ್ಬರು ಸದಸ್ಯರು ಸಾರಾ ಗಿಲ್ಲಿಸ್ ಮತ್ತು ಜೇರೆಡ್ ಐಸಾಕ್ಮನ್. ಈ ಇಬ್ಬರೂ ಸಿಬ್ಬಂದಿ ತಮ್ಮ ಬಾಹ್ಯಾಕಾಶ ಪ್ರಯಾಣದ ಬಗ್ಗೆ ವಿವರಿಸಿದರು. ಬಾಹ್ಯಾಕಾಶ ನೌಕೆಯ ಹೊರಗೆ ಅವರ ಹೊಚ್ಚಹೊಸ ಸ್ಪೇಸ್‌ಸೂಟ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಬಗ್ಗೆ ಮಾಹಿತಿ ನೀಡಿದರು. ಈ ಬಾಹ್ಯಾಕಾಶ ನಡಿಗೆಯು ಸರಳ ಮತ್ತು ತ್ವರಿತವಾಗಿತ್ತು ಎಂದು ಅವರು ತಮ್ಮ ಅನುಭವ ಹಂಚಿಕೊಂಡರು.
ಅನಾರೋಗ್ಯ ತಡೆಯಲು ವಿಶೇಷ ವ್ಯವಸ್ಥೆ:ಒತ್ತಡದಲ್ಲಿನ ಬದಲಾವಣೆಗಳಿಂದ ಉಂಟಾದ ಡಿಕಂಪ್ರೆಷನ್ ಕಾಯಿಲೆಯಿಂದ ಗಂಭೀರವಾಗಿ ಅನಾರೋಗ್ಯಕ್ಕೆ ಒಳಗಾಗುವುದನ್ನು ತಪ್ಪಿಸಲು ನಾಲ್ಕು ಸಿಬ್ಬಂದಿ "ಬೆಂಡ್ಸ್" ಎಂದು ಕರೆಯಲ್ಪಡುವ "ಪ್ರಿ-ಬ್ರೇಥಿಂಗ್"ದಲ್ಲಿ ಎರಡು ದಿನಗಳನ್ನು ಕಳೆದರು. ಇದು ರಕ್ತದಲ್ಲಿನ ಆಮ್ಲಜನಕದೊಂದಿಗೆ ಸಾರಜನಕವನ್ನು ಬದಲಿಸುವುದನ್ನು ಒಳಗೊಂಡಿರುತ್ತದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಗಗನಯಾತ್ರಿಗಳು ಆಗಾಗ್ಗೆ ರಿಪೇರಿಗಾಗಿ ವಿಸ್ತಾರವಾದ ಸಂಕೀರ್ಣದ ಉದ್ದಕ್ಕೂ ಚಲಿಸಬೇಕಾಗುತ್ತದೆ. ಹೀಗಾಗಿ ಈ ಹೋಸ್ ಸೂಟ್ಗಳ ಪರೀಕ್ಷೆ ನಡೆಸಲಾಗುತ್ತಿದೆ.
ಸಂಶೋಧನಾ ವಿಜ್ಞಾನಿ ಹೇಳುವುದಿಷ್ಟು:ಓಪನ್ ಯೂನಿವರ್ಸಿಟಿಯ ಸಂಶೋಧನಾ ವಿಜ್ಞಾನಿ ಡಾ. ಸಿಮಿಯೋನ್ ಬಾರ್ಬರ್ ಪ್ರಕಾರ, ಈ ರೀತಿಯ ಬಾಹ್ಯಾಕಾಶ ನಡಿಗೆಯು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹಿಂದಿನ ಪ್ರವಾಸಗಳಿಗಿಂತ "ಬಹಳ ವಿಭಿನ್ನ ವಿಧಾನವನ್ನು" ತೆಗೆದುಕೊಳ್ಳುತ್ತದೆ. "ಇದು ನಿಜವಾಗಿಯೂ ರೋಮಾಂಚನಕಾರಿಯಾಗಿದೆ ಮತ್ತು ಸ್ಪೇಸ್‌ಎಕ್ಸ್ ವಿಭಿನ್ನವಾಗಿ ಕೆಲಸ ಮಾಡಲು ಹೆದರುವುದಿಲ್ಲ ಎಂದು ಮತ್ತೊಮ್ಮೆ ತೋರಿಸುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ಅವರು ಹೇಳಿದರು.