TATA Cars 5 Star Rating ;ಭಾರತ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ ಮಕ್ಕಳ ಮತ್ತು ವಯಸ್ಕರ ಸುರಕ್ಷತೆ ಹಾಗೂ ರಕ್ಷಣೆ ವಿಭಾಗದಲ್ಲಿ ಟಾಟಾ ಕಾರುಗಳ ಕೆಲ ಮಾದರಿಗಳು 5 ಸ್ಟಾರ್ ರೇಟಿಂಗ್ ಪಡೆದುಕೊಂಡು ಮಿಂಚುತ್ತಿವೆ. ಈ ಕಾರುಗಳು ಅಂತಹ ರೇಟಿಂಗ್ ಪಡೆಯಲು ಕಾರಣಗಳೇನು? ಭದ್ರತಾ ಮಾನದಂಡಗಳಲ್ಲಿ ಕಂಪನಿಯು ವಿನ್ಯಾಸಗೊಳಿಸಿದ ವೈಶಿಷ್ಟ್ಯಗಳು ಯಾವುವು? ಅನ್ನುವುದನ್ನು ನೋಡುವುದಾದರೆ,
ಟಾಟಾ ಸಫಾರಿ, ಟಾಟಾ ಹ್ಯಾರಿಯರ್: ಟಾಟಾ ಸಫಾರಿ ಮತ್ತು ಟಾಟಾ ಹ್ಯಾರಿಯರ್ ಇಂಡಿಯಾ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ- ಭಾರತ್-ಎನ್‌ಸಿಎಪಿ ಅಡಿ ವಯಸ್ಕರು ಮತ್ತು ಮಕ್ಕಳ ಸುರಕ್ಷತೆಗಾಗಿ 5-ಸ್ಟಾರ್ ರೇಟಿಂಗ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಮಕ್ಕಳ ಸುರಕ್ಷತೆಯಲ್ಲಿ 49 ಅಂಕಗಳಲ್ಲಿ 44.54 ಅಂಕಗಳನ್ನು ಈ ಕಾರಿನ ಮಾದರಿಗಳು ಗಳಿಸಿಕೊಂಡಿವೆ. ವಯಸ್ಕರ ಸುರಕ್ಷತೆಯಲ್ಲಿ ಇದು 32 ರಲ್ಲಿ 30.08 ಅಂಕಗಳನ್ನು ಗಳಿಸಿದೆ. ಟಾಟಾ ಹ್ಯಾರಿಯರ್ ಬೆಲೆ ರೂ. 15.49 ಲಕ್ಷದಿಂದ 26.44 ಲಕ್ಷ ರೂ. ಆಗಿದ್ದರೆ ಟಾಟಾ ಸಫಾರಿ ಬೆಲೆ ರೂ. 16.19 ಲಕ್ಷ ರೂ. 27.34 ಲಕ್ಷ ರೇಂಜ್ನಲ್ಲಿದೆ.
ಟಾಟಾ ಸಫಾರಿ ಮತ್ತು ಟಾಟಾ ಹ್ಯಾರಿಯರ್ ಕಾರುಗಳು ಭಾರತದ NCAP ಪರೀಕ್ಷೆಗಳಲ್ಲಿ ವಯಸ್ಕರರಿಗೆ ಉತ್ತಮ ರಕ್ಷಣೆಯನ್ನು ಒದಗಿಸಿವೆ. ಅದರಲ್ಲೂ ಚಾಲಕ ಮತ್ತು ಪ್ರಯಾಣಿಕರ ಎದೆಗೆ ಸಾಕಷ್ಟು ರಕ್ಷಣೆ ನೀಡುತ್ತದೆ. 18 ತಿಂಗಳ ಮಕ್ಕಳ ಸುರಕ್ಷತೆ ವಿಭಾಗದಲ್ಲಿ ಹ್ಯಾರಿಯರ್ ಮತ್ತು ಸಫಾರಿ ಕಾರುಗಳು 12 ರಲ್ಲಿ 11.54 ಅಂಕಗಳನ್ನು ಗಳಿಸಿವೆ. 3 ವರ್ಷ ವಯಸ್ಸಿನ ಮಕ್ಕಳಿಗೆ ಸುರಕ್ಷತಾ ಮಾನದಂಡದಲ್ಲಿ 12 ರಲ್ಲಿ 12 ಅಂಕಗಳನ್ನು ಗಳಿಸಿದ್ದಾರೆ. ಈ ಮಾದರಿಯ ಕಾರುಗಳು ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್, ಐಸೊಫಿಕ್ಸ್ ಚೈಲ್ಡ್ ಸೀಟ್ ಮೌಂಟ್‌ಗಳು ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಹೊಂದಿವೆ. ಈ ಎರಡೂ ಕಾರುಗಳು 2 ಲೀಟರ್ ಸಾಮರ್ಥ್ಯದ ಡೀಸೆಲ್ ಎಂಜಿನ್ ಹೊಂದಿದೆ.
ಟಾಟಾ ನೆಕ್ಸನ್ ಇವಿ:ಭಾರತದ ಹೊಸ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ ಎನ್‌ಸಿಎಪಿ ಅಡಿ ವಯಸ್ಕರ ಮತ್ತು ಮಕ್ಕಳ ಸುರಕ್ಷತೆಗಾಗಿ 5 -ಸ್ಟಾರ್ ರೇಟಿಂಗ್ ಪಡೆದುಕೊಂಡ ಮತ್ತೊಂದು ಕಾರು ಎಂದರೆ ಅದು Tata Nexon EV. ಮಕ್ಕಳ ಸುರಕ್ಷತೆಯಲ್ಲಿ 49 ಅಂಕಗಳಲ್ಲಿ 44.95 ಅಂಕಗಳನ್ನು ಈ ಮಾದರಿ ಕಾರು ಗಳಿಸಿದೆ. ಹಿರಿಯರ ಭದ್ರತೆಯಲ್ಲಿ 32 ರಲ್ಲಿ 29.86. ಅಂಕಗಳನ್ನು ಪಡೆದಿದೆ. ಏತನ್ಮಧ್ಯೆ, ಟಾಟಾ ನೆಕ್ಸಾನ್ ಇವಿ ಬೆಲೆ ರೂ.14.49 ಲಕ್ಷದಿಂದ ರೂ.19.49 ಲಕ್ಷದವರೆಗೆ ಇದೆ.
ಈ ಕಾರು ಭಾರತದ NCAP ಪರೀಕ್ಷೆಗಳಲ್ಲಿ ಉತ್ತಮ ರೇಟಿಂಗ್ ಗಳಿಸಿದೆ. ಚಾಲಕನ ಎದೆ, ಕಾಲುಗಳು ಮತ್ತು ಪ್ರಯಾಣಿಕರಿಗೆ ಉತ್ತಮ ರಕ್ಷಣೆ ನೀಡುತ್ತದೆ. ಟಾಟಾ ನೆಕ್ಸಾನ್ EV 18 ತಿಂಗಳ ಮಕ್ಕಳ ಸುರಕ್ಷತೆ ವಿಭಾಗದಲ್ಲಿ 12 ರಲ್ಲಿ 11.94 ಅಂಕಗಳನ್ನು ಗಳಿಸಿದೆ. ಇದು 3 ವರ್ಷ ವಯಸ್ಸಿನ ಸುರಕ್ಷತಾ ಮಾನದಂಡದಲ್ಲಿ 12 ರಲ್ಲಿ 12 ಅಂಕಗಳನ್ನು ಪಡೆದುಕೊಂಡಿದೆ. ಈ ಕಾರು 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಹಿಲ್ ಹೋಲ್ಡ್ ಅಸಿಸ್ಟ್, ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳು, ಐಸೊಫಿಕ್ಸ್ ಆಂಕರ್‌ಗಳು ಮತ್ತು ಎಲೆಕ್ಟ್ರಾನಿಕ್ ಟ್ರಾಕ್ಷನ್ ಕಂಟ್ರೋಲ್‌ನಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಟಾಟಾ ನೆಕ್ಸಾನ್ EV ಲಾಂಗ್ ರೇಂಜ್ (LR) ರೂಪಾಂತರವು 40.5 kWh ಬ್ಯಾಟರಿ ಪ್ಯಾಕ್ ಹೊಂದಿದೆ. ಒಮ್ಮೆ ಚಾರ್ಜ್ ಮಾಡಿದರೆ ಕಾರು 465 ಕಿಮೀ ವ್ಯಾಪ್ತಿವರೆಗೆ ಬಿಡುವಿಲ್ಲದೇ ಓಡುತ್ತದೆ. ಮಧ್ಯಮ ಶ್ರೇಣಿಯ ರೂಪಾಂತರವು 30 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಒಮ್ಮೆ ಚಾರ್ಜ್ ಮಾಡಿದರೆ 325 ಕಿ.ಮೀ ಪ್ರಯಾಣಿಸಬಹುದು.
ಟಾಟಾ ಪಂಚ್ ಇವಿ:ಟಾಟಾ ಪಂಚ್ EV ಭಾರತದ ಹೊಸ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ - ಭಾರತ್-ಎನ್‌ಸಿಎಪಿ ರೇಟಿಂಗ್‌ನಲ್ಲಿ 5 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ಟಾಟಾ ಸಫಾರಿ, ಟಾಟಾ ಹ್ಯಾರಿಯರ್ ಮತ್ತು ಟಾಟಾ ಪಂಚ್ ಇವಿ ನಂತರ ಎನ್‌ಸಿಎಪಿ ಪರೀಕ್ಷೆಯಲ್ಲಿ 5 ಸ್ಟಾರ್ ರೇಟಿಂಗ್ ಪಡೆದ ಟಾಟಾ ಮೋಟಾರ್ಸ್‌ನ ನಾಲ್ಕನೇ ವಾಹನ ಇದಾಗಿದೆ. ಇದು ಮಕ್ಕಳ ಸುರಕ್ಷತೆಯಲ್ಲಿ 49 ರಲ್ಲಿ 45 ಅಂಕಗಳನ್ನು ಗಳಿಸಿದೆ. ಹಿರಿಯರ ಭದ್ರತೆಯಲ್ಲಿ 32 ರಲ್ಲಿ 31.46 ಅಂಕಗಳನ್ನು ಪಡೆದುಕೊಂಡಿದೆ. ಟಾಟಾ ಪಂಚ್ ಇವಿ ಬೆಲೆ ರೂ.10.99 ಲಕ್ಷದಿಂದ ರೂ.15.49 ಲಕ್ಷದವರೆಗಿನ ರೇಂಜ್ನಲ್ಲಿ ದೊರೆಯುತ್ತದೆ.
ವಯಸ್ಕರ ಸುರಕ್ಷತೆಗೆ ಬಂದಾಗ, ಟಾಟಾ ಪಂಚ್ EV ದೇಹದ ಎಲ್ಲಾ ಭಾಗಗಳಿಗೆ ಉತ್ತಮ ರಕ್ಷಣೆ ನೀಡುತ್ತದೆ. ಇದು ಚಾಲಕ, ಪ್ರಯಾಣಿಕರ ಎದೆ ಮತ್ತು ಪಾದಗಳನ್ನು ರಕ್ಷಿಸುತ್ತದೆ. ಟಾಟಾ ಪಂಚ್ EV ಆರು ಏರ್‌ಬ್ಯಾಗ್‌ಗಳನ್ನು ಹೊಂದಿದೆ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಹಿಲ್ ಹೋಲ್ಡ್ ಅಸಿಸ್ಟ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಪಾರ್ಕಿಂಗ್ ಸೆನ್ಸಾರ್‌ಗಳು, ISOFIX ಚೈಲ್ಡ್ ಸೀಟ್ ಆಂಕರ್‌ಗಳಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಟಾಟಾ ಪಂಚ್ EV ಲಾಂಗ್ ರೇಂಜ್ (LR) ರೂಪಾಂತರವು 35 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಇದು 421 ಕಿಮೀ ವರೆಗೆ ಯಾವುದೇ ಅಡೆ ತಡೆಯಿಲ್ಲದೇ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಮಧ್ಯಮ ಶ್ರೇಣಿಯ ರೂಪಾಂತರವು 25 kWh ಬ್ಯಾಟರಿ ಪ್ಯಾಕ್ ಹೊಂದಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 315 ಕಿ.ಮೀ ಪ್ರಯಾಣಿಸಬಹುದು.
ಇದನ್ನು ಓದಿ:ಮತ್ತೆ ವಿಶ್ವದ ನಂಬರ್ ಒನ್ ಪಟ್ಟಕ್ಕೇರಿದ ಎಲೋನ್ ಮಸ್ಕ್: ಮುಖೇಶ್ ಅಂಬಾನಿ ಏಷ್ಯಾದ ಅತ್ಯಂತ ಶ್ರೀಮಂತ! - Musk World Richest Person Again
5 ಲಕ್ಷದೊಳಗಿನ ಉತ್ತಮ ಕಾರು ಖರೀದಿಸಬೇಕೇ?: ಇಲ್ಲಿವೆ 6 ಟಾಪ್ ಮಾದರಿಗಳು.. ಪೀಚರ್ಸ್ ನೋಡಿ ಬೈ ಮಾಡಬಹುದು! - Best Cars Under 5 Lakh