ಕರ್ನಾಟಕ

karnataka

ETV Bharat / technology

ಸ್ಟಾರ್ ಲೈನರ್​ ಬಾಹ್ಯಾಕಾಶ ನೌಕೆ ಉಡಾವಣೆ ಮತ್ತೆ ರದ್ದು: ಜೂನ್ 5ರಂದು ಮತ್ತೊಮ್ಮೆ ಯತ್ನ - Boeing Starliner Delayed

ಪದೇ ಪದೆ ವೈಫಲ್ಯಕ್ಕೀಡಾಗುತ್ತಿರುವ ಬೋಯಿಂಗ್​ನ ಸ್ಟಾರ್ ಲೈನರ್​ ಬಾಹ್ಯಾಕಾಶ ನೌಕೆಯ ಮುಂದಿನ ಉಡಾವಣಾ ಪ್ರಯತ್ನವು ಜೂನ್ 5 ರಂದು ನಡೆಯಲಿದೆ.

ಸ್ಟಾರ್ ಲೈನರ್​ ಬಾಹ್ಯಾಕಾಶ ನೌಕೆ
ಸ್ಟಾರ್ ಲೈನರ್​ ಬಾಹ್ಯಾಕಾಶ ನೌಕೆ (IANS)

By ETV Bharat Karnataka Team

Published : Jun 3, 2024, 4:47 PM IST

ನವದೆಹಲಿ: ಬೋಯಿಂಗ್​ನ ಸ್ಟಾರ್ ಲೈನರ್​ ಬಾಹ್ಯಾಕಾಶ ನೌಕೆಯ ಮಾನವ ಸಹಿತ ಪರೀಕ್ಷಾ ಹಾರಾಟದ ಉಡಾವಣೆಯ ಆರನೇ ಪ್ರಯತ್ನ ಜೂನ್ 5ರಂದು ನಡೆಯಲಿದೆ ಎಂದು ನಾಸಾ ಸೋಮವಾರ ತಿಳಿಸಿದೆ. "ನಾಸಾದ ಬೋಯಿಂಗ್ ಸ್ಪೇಸ್ ಕ್ರೂ ಫ್ಲೈಟ್ ಟೆಸ್ಟ್ ಮಿಷನ್ ತಂಡಗಳು ಜೂನ್ 5 ರಂದು ಬೆಳಿಗ್ಗೆ 10:52 ಕ್ಕೆ ಉಡಾವಣೆ ನಡೆಸಲು ತಯಾರಿ ನಡೆಸುತ್ತಿವೆ" ಎಂದು ನಾಸಾ ಎಕ್ಸ್​ ಪೋಸ್ಟ್​ನಲ್ಲಿ ತಿಳಿಸಿದೆ.

ಜೂನ್ 1 ರಂದು ಮಿಷನ್​ನ ಎರಡನೇ ಪ್ರಯತ್ನವು ಕೊನೆಯ ಕ್ಷಣದಲ್ಲಿ ವಿಫಲಗೊಂಡಿತ್ತು. ಕ್ಷಣಗಣನೆಯ ಸಮಯದಲ್ಲಿ ಸಮಸ್ಯೆಗಳನ್ನು ಎದುರಿಸಿದ ಸಿಂಗಲ್ ಗ್ರೌಂಡ್​ ವಿದ್ಯುತ್ ಸರಬರಾಜಿನ ಸಮಸ್ಯೆಗಳನ್ನು ಯುನೈಟೆಡ್ ಲಾಂಚ್ ಅಲೈಯನ್ಸ್ (ಯುಎಲ್ಎ) ನ ಮಿಷನ್ ಅಧಿಕಾರಿಗಳು ಗುರುತಿಸಿರುವುದರಿಂದ ಉಡಾವಣೆಯನ್ನು ರದ್ದುಗೊಳಿಸಲಾಗಿದೆ ಎಂದು ನಾಸಾ ಹೇಳಿತ್ತು.

ಬೋಯಿಂಗ್​ನ ಸ್ಟಾರ್ ಲೈನರ್​ ಬಾಹ್ಯಾಕಾಶ ನೌಕೆ ಉಡಾವಣೆಯ ಮೊದಲ ಪ್ರಯತ್ನ ಮೇ 7ರಂದು ನಡೆದಿತ್ತು. ಆದರೆ ಯುಎಲ್ಎಯ ಅಟ್ಲಾಸ್ ವಿ ರಾಕೆಟ್​ನ ಮೇಲಿನ ಹಂತದಲ್ಲಿ ವಾಲ್ವ್ ಸಮಸ್ಯೆಯಿಂದಾಗಿ ಮೊದಲ ಮಾನವಸಹಿತ ಕಾರ್ಯಾಚರಣೆಯನ್ನು ಉಡಾವಣೆಗೆ ಎರಡು ಗಂಟೆಗಳ ಮೊದಲು ರದ್ದು ಮಾಡಲಾಗಿತ್ತು. ನಂತರ ಹೀಲಿಯಂ ಸೋರಿಕೆಯಿಂದಾಗಿ ಉಡಾವಣೆಯನ್ನು ಮೇ 10 ಕ್ಕೆ, ಮೇ 21 ಕ್ಕೆ ಮತ್ತು ನಂತರ ಮೇ 25 ಕ್ಕೆ ಮುಂದೂಡಲಾಗಿತ್ತು.

ಆಕಸ್ಮಾತ್ತಾಗಿ ಈಗ ಜೂನ್ 5 ರಂದು ಉಡಾವಣೆ ಸಾಧ್ಯವಾಗದಿದ್ದಲ್ಲಿ, ಕಂಪನಿಯು ಜೂನ್ 6 ರಂದು ಬ್ಯಾಕಪ್ ದಿನಾಂಕವಾಗಿ ಮೀಸಲಿರಿಸಿದೆ. ನಾಸಾ ಗಗನಯಾತ್ರಿಗಳಾದ ಬುಚ್ ವಿಲ್ಮೋರ್ ಮತ್ತು ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ ಅವರನ್ನು ಬಾಹ್ಯಾಕಾಶ ನೌಕೆಯು ಸುಮಾರು ಒಂದು ವಾರಗಳ ಕಾಲ ಬಾಹ್ಯಾಕಾಶ ನಿಲ್ದಾಣಕ್ಕೆ ಕರೆದೊಯ್ಯಲಿದ್ದು, ನಂತರ ಮರುಬಳಕೆ ಮಾಡಬಹುದಾದ ಮಾನವ ಕ್ಯಾಪ್ಸೂಲ್​ನಲ್ಲಿ ಅವರು ಭೂಮಿಗೆ ಮರಳಲಿದ್ದಾರೆ.

ಸ್ಟಾರ್ ಲೈನರ್ ಮಿಷನ್ ಭವಿಷ್ಯದ ನಾಸಾ ಕಾರ್ಯಾಚರಣೆಗಳಿಗಾಗಿ ಗಗನಯಾತ್ರಿಗಳು ಮತ್ತು ಸರಕುಗಳನ್ನು ಭೂಮಿಯ ಕೆಳ ಕಕ್ಷೆ ಮತ್ತು ಅದರಾಚೆಗೆ ಸಾಗಿಸುವ ಗುರಿಯನ್ನು ಹೊಂದಿದೆ. ಈ ಮಿಷನ್ ಬೋಯಿಂಗ್ ಮತ್ತು ನಾಸಾ ಎರಡಕ್ಕೂ ಮಹತ್ವದ ಮೈಲಿಗಲ್ಲಾಗಿದೆ.

1998 ರಿಂದ ನಾಸಾ ಗಗನಯಾತ್ರಿಯಾಗಿರುವ ವಿಲಿಯಮ್ಸ್, ಸ್ಟಾರ್ ಲೈನರ್ ಮಿಷನ್​ನಲ್ಲಿ ಹಾರಾಟ ನಡೆಸಿದ ಮೊದಲ ಮಹಿಳೆಯಾಗಿದ್ದಾರೆ. ಅವರು ಈ ಹಿಂದೆ 322 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದಿದ್ದಾರೆ ಮತ್ತು ಒಟ್ಟು ಬಾಹ್ಯಾಕಾಶ ನಡಿಗೆ ಸಮಯದ ವಿಷಯದಲ್ಲಿ ಮಹಿಳಾ ಗಗನಯಾತ್ರಿಗಳಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಯುದ್ಧಗಳಲ್ಲಿ ಬಳಸುವ ಜೆಟ್​ಗಳಲ್ಲಿ 8,000 ಗಂಟೆಗಳ ಕಾಲ ಹಾರಾಟ ನಡೆಸಿದ ನೌಕಾಪಡೆಯ ಪರೀಕ್ಷಾ ಪೈಲಟ್ ವಿಲ್ಮೋರ್ ಈಗಾಗಲೇ 178 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದಿದ್ದಾರೆ ಮತ್ತು ನಾಲ್ಕು ಬಾಹ್ಯಾಕಾಶ ನಡಿಗೆಗಳನ್ನು ನಡೆಸಿದ್ದಾರೆ.

ಇದನ್ನೂ ಓದಿ : ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದ ಚೀನಾದ ಚಾಂಗ್'ಇ-6 ನೌಕೆ - Chang e 6 lands on Moon

ABOUT THE AUTHOR

...view details