SpaceX Created History:ಅಮೆರಿಕದ ಕೈಗಾರಿಕೋದ್ಯಮಿ ಎಲೋನ್ ಮಸ್ಕ್ ಅವರ ಕಂಪನಿ ಸ್ಪೇಸ್‌ಎಕ್ಸ್ ಪೊಲಾರಿಸ್ ಡಾನ್ ಮಿಷನ್ ಪ್ರಾರಂಭಿಸಿದೆ. ಆದರೆ, ಹವಾಮಾನದ ಕಾರಣದಿಂದಾಗಿ ಉಡಾವಣೆ ಸುಮಾರು ಎರಡು ಗಂಟೆಗಳ ಕಾಲ ವಿಳಂಬವಾಯಿತು. ಈ ಮಿಷನ್ ಐದು ದಿನಗಳವರೆಗೆ ಇರುತ್ತದೆ. ಬಿಲಿಯನೇರ್ ಉದ್ಯಮಿ ಸೇರಿದಂತೆ ನಾಲ್ವರು ಗಗನಯಾತ್ರಿಗಳು ಮಂಗಳವಾರ ಬಾಹ್ಯಾಕಾಶ ಯಾನ ಕೈಗೊಂಡಿದ್ದಾರೆ.
ಹೊಸ ಸ್ಪೇಸ್‌ಸೂಟ್ ವಿನ್ಯಾಸಗಳನ್ನು ಪರೀಕ್ಷಿಸುವುದು ಈ ಕಾರ್ಯಾಚರಣೆಯ ಉದ್ದೇಶವಾಗಿದೆ. ಇದು ವಿಶ್ವದ ಮೊದಲ ಖಾಸಗಿ ಬಾಹ್ಯಾಕಾಶ ನಡಿಗೆ. ಎಲ್ಲ ಪ್ರಯಾಣಿಕರು ಸ್ಪೇಸ್‌ಎಕ್ಸ್‌ನ ಕ್ರೂ ಡ್ರ್ಯಾಗನ್ ಕ್ಯಾಪ್ಸುಲ್ ಮೂಲಕ ಬಾಹ್ಯಾಕಾಶಕ್ಕೆ ಕಾಲಿಟ್ಟಿದ್ದಾರೆ. ಇದೇ ಕ್ಯಾಪ್ಸುಲ್ ಮೂಲಕ ನಾಸಾದ ಸುನೀತಾ ವಿಲಿಯಮ್ಸ್ ಅವರನ್ನು ಬಾಹ್ಯಾಕಾಶದಿಂದ ಮರಳಿ ಕರೆತರುವ ಯೋಜನೆಯಲ್ಲಿ ಈ ನೌಕೆ ಕಾರ್ಯನಿರ್ವಹಿಸುತ್ತಿದೆ.
ಇವರೇ ನೋಡಿ ಆ ನಾಲ್ಕು ಖಾಸಗಿ ಬಾಹ್ಯಾಕಾಶ ಯಾನಿಗಳು:ಸಿಬ್ಬಂದಿಯಲ್ಲಿ ಒಬ್ಬ ಬಿಲಿಯನೇರ್ ವಾಣಿಜ್ಯೋದ್ಯಮಿ, ನಿವೃತ್ತ ಮಿಲಿಟರಿ ಫೈಟರ್ ಪೈಲಟ್ ಮತ್ತು ಇಬ್ಬರು ಸ್ಪೇಸ್‌ಎಕ್ಸ್ ಉದ್ಯೋಗಿಗಳು ಸೇರಿದ್ದಾರೆ. ಬಿಲಿಯನೇರ್ ಜೇರೆಡ್ ಐಸಾಕ್‌ಮನ್, ಮಿಷನ್ ಪೈಲಟ್ ಸ್ಕಾಟ್ ಪೊಟೀಟ್, ಸ್ಪೇಸ್‌ಎಕ್ಸ್ ಉದ್ಯೋಗಿಗಳಾದ ಸಾರಾ ಗಿಲ್ಲಿಸ್ ಮತ್ತು ಅನ್ನಾ ಮೆನನ್ ಕ್ಯಾಪ್ಸುಲ್‌ನಲ್ಲಿ ಹಾರಿದರು. ಸ್ಕಾಟ್ ಪೊಟೆಟ್ ಅಮೆರಿಕ ವಾಯುಪಡೆಯ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಆಗಿದ್ದಾರೆ.
ಗಿಲ್ಲಿಸ್ ಮತ್ತು ಅನ್ನಾ ಮೆನನ್ ಸ್ಪೇಸ್‌ಎಕ್ಸ್‌ನಲ್ಲಿ ಹಿರಿಯ ಎಂಜಿನಿಯರ್‌ಗಳು. ಐಸಾಕ್‌ಮನ್ ಮತ್ತು ಗಿಲ್ಲಿಸ್ ಬಾಹ್ಯಾಕಾಶ ನೌಕೆಯಿಂದ ನಿರ್ಗಮಿಸುತ್ತಾರೆ ಮತ್ತು ಬಾಹ್ಯಾಕಾಶ ನಡಿಗೆಯನ್ನು ನಡೆಸುತ್ತಾರೆ. ಆದರೆ ಪೊಟೀಟ್ ಮತ್ತು ಮೆನನ್ ಕ್ಯಾಬಿನ್‌ನಲ್ಲಿ ಉಳಿಯಲಿದ್ದಾರೆ. ನಾಲ್ವರು ಗಗನಯಾತ್ರಿಗಳು ಅಲ್ಲಿ ವೈಜ್ಞಾನಿಕ ಪ್ರಯೋಗಗಳನ್ನೂ ನಡೆಸಲಿದ್ದಾರೆ. ಕಾಸ್ಮಿಕ್ ವಿಕಿರಣ ಮತ್ತು ಬಾಹ್ಯಾಕಾಶವು ಮಾನವ ದೇಹದ ಮೇಲೆ ಯಾವ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ತಿಳಿಯಲು ಈ ನಡಿಗೆ ವೇಳೆ ಪ್ರಯತ್ನಿಸಲಾಗುವುದು.