ಹೈದರಾಬಾದ್: ಮಾರ್ಚ್ 25ರ ಚಂದ್ರ ಗ್ರಹಣದ ನಂತರ ಏಪ್ರಿಲ್ 8 ರಂದು ಸಂಭವಿಸಲಿರುವ ಸಂಪೂರ್ಣ ಸೂರ್ಯಗ್ರಹಣಕ್ಕಾಗಿ ಖಗೋಳ ಆಸಕ್ತರು ಎದುರು ನೋಡುತ್ತಿದ್ದಾರೆ. ಖಗೋಳ ಅದ್ಭುತ ಎಂದು ನಿರೀಕ್ಷಿಸಲಾದ ಈ ಗ್ರಹಣವು ಭೂಮಿಯ ಸಾಮೀಪ್ಯ ಮತ್ತು ಸಂಭಾವ್ಯ ಸೌರ ಸ್ಫೋಟಗಳಿಂದಾಗಿ ವಿಸ್ತೃತ ಅವಧಿಯವರೆಗೆ ಘಟಿಸಲಿದೆ ಮತ್ತು ಹೆಚ್ಚಿನ ಚಟುವಟಿಕೆಗಳಿಗೆ ಸಾಕ್ಷಿಯಾಗಲಿದೆ.
ಸೂರ್ಯಗ್ರಹಣದ ಸಮಯ: ಏಪ್ರಿಲ್ 8, 2024 ರಂದು ನಿಗದಿಯಾಗಿರುವ ಸಂಪೂರ್ಣ ಸೂರ್ಯಗ್ರಹಣವು ಮಧ್ಯಾಹ್ನ 02.12 ಕ್ಕೆ (ಭಾರತೀಯ ಕಾಲಮಾನ) ಪ್ರಾರಂಭವಾಗುತ್ತದೆ ಮತ್ತು ಏಪ್ರಿಲ್ 9 ರಂದು ಬೆಳಗ್ಗೆ 02.22 ಕ್ಕೆ ಕೊನೆಗೊಳ್ಳುತ್ತದೆ. ವಿಶ್ವದ ಹಲವಾರು ದೇಶಗಳಲ್ಲಿ ಕಾಣಿಸುವ ಈ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಇದು ಮೆಕ್ಸಿಕೊದ ಪೆಸಿಫಿಕ್ ಕರಾವಳಿಯಿಂದ ಪ್ರಾರಂಭವಾಗಿ, ಯುನೈಟೆಡ್ ಸ್ಟೇಟ್ಸ್ ಮೂಲಕ ದಾಟಿ, ಪೂರ್ವ ಕೆನಡಾದಲ್ಲಿ ಕೊನೆಗೊಳ್ಳುತ್ತದೆ.
ಸೂರ್ಯಗ್ರಹಣದ ಅವಧಿ: 4 ನಿಮಿಷ 28 ಸೆಕೆಂಡುಗಳ ಗರಿಷ್ಠ ಅವಧಿಯೊಂದಿಗೆ, 2017 ರ ಗ್ರಹಣದ ಎರಡು ಪಟ್ಟು ಹೆಚ್ಚು ಅವಧಿಯನ್ನು ಹೊಂದಿರುವ ಈ ಘಟನೆಯು ಸಂಪೂರ್ಣತೆಯ ಹಾದಿಯಲ್ಲಿ ವೀಕ್ಷಕರಿಗೆ ವಿಸ್ಮಯಕಾರಿ ದೃಶ್ಯಗಳನ್ನು ನೀಡಲಿದೆ.
ಸಂಪೂರ್ಣ ಸೂರ್ಯಗ್ರಹಣ ಎಂದರೇನು?:ಚಂದ್ರನು ಸೂರ್ಯ ಮತ್ತು ಭೂಮಿಯ ನಡುವೆ ಹಾದುಹೋದಾಗ, ಸೂರ್ಯನು ಭೂಮಿಗೆ ಗೋಚರವಾಗದಂತಾದಾಗ ಸಂಪೂರ್ಣ ಸೂರ್ಯಗ್ರಹಣ ಸಂಭವಿಸುತ್ತದೆ. ಚಂದ್ರನ ನೆರಳು ಸೂರ್ಯನನ್ನು ಸಂಪೂರ್ಣವಾಗಿ ಆವರಿಸಿರುವ ಸ್ಥಿತಿಯಲ್ಲಿ ಗ್ರಹಣವು ಗೋಚರವಾಗುವ ವಿದ್ಯಮಾನವನ್ನು ಸಂಪೂರ್ಣತೆಯ ಪಥ ಎಂದು ಕರೆಯಲಾಗುತ್ತದೆ. ಗ್ರಹಣದ ಸಮಯದಲ್ಲಿ ಮುಂಜಾನೆ ಅಥವಾ ಮುಸ್ಸಂಜೆಯಂತೆ ಕತ್ತಲೆಯಾಗುತ್ತದೆ.