ದಾವಣಗೆರೆ : ದ್ವಿಚಕ್ರ ವಾಹನಗಳಲ್ಲಿ ಬಂದು ಸರಗಳ್ಳತನ ಮಾಡುತ್ತಿದ್ದ ಕಳ್ಳರು ಇದೀಗ ಹೊಸ ಮಾರ್ಗ ಕಂಡುಕೊಂಡಿದ್ದಾರೆ. ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡುವ ಸರಗಳ್ಳರು ತಮ್ಮ ದ್ವಿಚಕ್ರ ವಾಹನದಲ್ಲಿ ಲಿಫ್ಟ್ ಕೊಡುವ ನೆಪದಲ್ಲಿ ಚಿನ್ನದ ಸರ ಎಗರಿಸುತ್ತಿರುವ ಪ್ರಕರಣ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೇಬೆನ್ನೂರಿನ ಚಿಕ್ಕಬೆನ್ನೂರು ಗ್ರಾಮದ ಬಳಿ ಡ್ರಾಪ್ ಕೊಡುವ ನೆಪದಲ್ಲಿ ಮಹಿಳೆಯ ಸರಗಳ್ಳತನ ನಡೆದಿದೆ. ರತ್ನಮ್ಮ ಚಿನ್ನದ ಸರ ಕಳೆದುಕೊಂಡವರು.
ಡ್ರಾಪ್ ಪಡೆಯುವ ಮುನ್ನ ಹುಷಾರ್ : ಚಿಕ್ಕಬೆನ್ನೂರು ಗ್ರಾಮಕ್ಕೆ ನೇರ ಬಸ್ ಸಂಪರ್ಕ ಇಲ್ಲದ ಕಾರಣ ಬಹುತೇಕರು ನಡೆದುಕೊಂಡೇ ಊರು ಸೇರುವ ಪರಿಸ್ಥಿತಿ ಇಂದಿಗೂ ಇದೆ. ರತ್ನಮ್ಮ, ಗೌರಮ್ಮ ಹಾಗೂ ಶಾಂತಮ್ಮ ಎಂಬ ಮೂರು ಜನ ಮಹಿಳೆಯರು ಕೂಲಿ ಕೆಲಸ ಮುಗಿಸಿ ಗ್ರಾಮದ ಕಡೆ ಹೆಜ್ಜೆ ಹಾಕುತ್ತಿದ್ದರು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಆಗಮಿಸಿದ ಇಬ್ಬರು ಅಪರಿಚಿತರು ಬೈಕ್ನಲ್ಲಿ ಡ್ರಾಪ್ ಕೊಡುವ ನಾಟಕ ಆಡಿ ಸ್ವಲ್ಪ ದೂರ ಸಾಗಿದ್ದಾರೆ. ನಂತರ ರತ್ನಮ್ಮಳ ಕೊರಳಲ್ಲಿದ್ದ 2.50 ಲಕ್ಷ ಮೌಲ್ಯದ 40 ಗ್ರಾಂ ಮಾಂಗಲ್ಯ ಸರ ಕಸಿದುಕೊಳ್ಳಲು ಯತ್ನಿಸಿದ್ದಾರೆ.
ಈ ವೇಳೆ ರತ್ನಮ್ಮ ಭಯಪಟ್ಟು ಕೂಗಿಕೊಂಡಿದ್ದಾರೆ. ರತ್ನಮ್ಮರೊಂದಿಗೆ ಹಿಂದೆ ಬರುತ್ತಿದ್ದ ಗೌರಮ್ಮ ಹಾಗೂ ಶಾಂತಮ್ಮ ರತ್ನಮ್ಮರ ರಕ್ಷಣೆಗೆ ಧಾವಿಸಿದ್ದಾರೆ. ಬೈಕ್ನ ಹಿಂಬದಿ ಕುಳಿತಿದ್ದ ತುಮಕೂರು ಜಿಲ್ಲೆಯ ಶಿರಾ ತಾಲೂಕು ಮಾದನಾಯಕನಹಳ್ಳಿ ಗ್ರಾಮದ ಸುರೇಶ ಎಂಬುವನನ್ನು ರತ್ನಮ್ಮ ಬೆನ್ನತ್ತಿ ಬೈಕ್‌ನಿಂದ ಬೀಳಿಸಿದ್ದಾರೆ. ಆಗ ಸುರೇಶನು ರತ್ನಮ್ಮ ಅವರಿಗೆ ಕಲ್ಲಿನಿಂದ ಹೊಡೆದಿದ್ದಾನೆ. ರಕ್ತಸ್ರಾವದ ನಡುವೆಯೂ ರತ್ನಮ್ಮ ಆತನನ್ನು ಹಿಡಿದು ನೆಲಕ್ಕುರುಳಿಸಿದ್ದಾರೆ. ಈ ವೇಳೆ ಚಿಕ್ಕಬೆನ್ನೂರು ಗ್ರಾಮದ ಕಡೆಯಿಂದ ಬಂದ ಕೆಲವರು ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಮತ್ತೋರ್ವ ಕಳ್ಳ ಸೋಮಶೇಖರ್ ತಪ್ಪಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಸ್ಪಿ ಉಮಾಪ್ರಶಾಂತ್ ಹೇಳಿದ್ದೇನು ? ಈ ಕುರಿತು ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿದ ಎಸ್ಪಿ ಉಮಾ ಪ್ರಶಾಂತ್, "ಈ ಸರಗಳ್ಳತನ ಪ್ರಕರಣ ಸಂಬಂಧ ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರತ್ನಮ್ಮ ಎಂಬುವರಿಗೆ ಡ್ರಾಪ್ ಕೊಡುವ ನೆಪದಲ್ಲಿ ಸ್ವಲ್ಪ ದೂರ ಸಾಗಿ ಮತ್ತೆ ಮಹಿಳೆಯನ್ನು ಇಳಿಸಿ ಮಾಂಗಲ್ಯ ಸರ ಕಿತ್ತುಕೊಂಡಿದ್ದಾರೆ. ಈ ವೇಳೆ ಜೊತೆಗೆ ಇದ್ದ ಮಹಿಳೆಯರು, ಸ್ಥಳೀಯರ ಸಹಾಯದಿಂದ ಓರ್ವನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಮತ್ತೋರ್ವ ಆರೋಪಿಗಾಗಿ ಹುಡುಕಾಟ ನಡೆದಿದೆ. ಇಂತಹ ಪ್ರಕರಣಗಳು ಮರುಕಳಿಸದಂತೆ ಕ್ರಮ ವಹಿಸಿದ್ದೇವೆ" ಎಂದರು.
ಇದನ್ನೂ ಓದಿ : ಬೆಳಗಾವಿಯಲ್ಲಿ ಮಹಿಳೆ ಮುಖಕ್ಕೆ ಖಾರದ ಪುಡಿ ಎರಚಿ ದರೋಡೆ - GOLD CHAIN ROBBERY