ಬೆಂಗಳೂರು: ತೊಗರಿ ಬೆಳೆಗಾರರಿಗೆ ರಾಜ್ಯ ಸರ್ಕಾರ ಮಹತ್ವದ ಘೋಷಣೆ ಮಾಡಿದೆ. ಕೇಂದ್ರ ಸರ್ಕಾರದ ನಿಗದಿತ ಬೆಂಬಲ ಬೆಲೆ ಜೊತೆಗೆ ರಾಜ್ಯ ಸರ್ಕಾರ ಬೋನಸ್ 450 ರೂ.ಗಳ ಸಹಾಯಧನ ನೀಡಲು ನಿರ್ಧರಿಸಿದ್ದು, ಆರ್ಥಿಕ ಇಲಾಖೆಯ ಅನುಮೋದನೆ ದೊರೆತಿದೆ.
2024-25ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್ಎಕ್ಯೂ ಗುಣಮಟ್ಟದ ತೊಗರಿ ಖರೀದಿಗೆ ಸಂಬಂಧಿಸಿದಂತೆ, ಕೇಂದ್ರ ಸರ್ಕಾರದ ಬೆಂಬಲ ಬೆಲೆ 7,550 ರೂ. ಜೊತೆಗೆ ರಾಜ್ಯ ಸರ್ಕಾರದ ಪ್ರೋತಾಹ ಧನ 450 ರೂ. ಸೇರಿ ಪ್ರತಿ ಕ್ವಿಂಟಾಲ್ಗೆ ಒಟ್ಟು 8,000 ರೂ. ನೀಡುವುದಾಗಿ ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಕಳೆದ ಜನವರಿಯಲ್ಲಿ ಭರವಸೆ ನೀಡಿದ್ದರು.
![ANNOUNCEMENT OF SUBSIDY](https://etvbharatimages.akamaized.net/etvbharat/prod-images/08-02-2025/kn-bng-07-announcement-of-subsidy-for-togari-growers-script-7208083_08022025182508_0802f_1739019308_537.jpg)
ಅದರಂತೆ ಮುಖ್ಯಮಂತ್ರಿಗಳು ಅನುಮೋದನೆ ನೀಡಿದ್ದು ಹಾಗೂ ಇಂದು ಆರ್ಥಿಕ ಇಲಾಖೆ ಸಹಮತಿ ನೀಡಿದೆ. ಈ ಕುರಿತು ಸಂಬಂಧಿಸಿದ ಇಲಾಖೆಗೆ ತಕ್ಷಣದಿಂದ ಅಷ್ಠಾನಗೊಳಿಸಲು ಸೂಕ್ತ ನಿರ್ದೇಶನ ನೀಡಲಾಗಿದೆ.
ಆದ್ದರಿಂದ ರಾಜ್ಯದ ಪ್ರಮುಖ ತೊಗರಿ ಬೆಳೆಯುವ ಜಿಲ್ಲೆಗಳಾದ ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ವಿಜಯಪುರ, ಕೊಪ್ಪಳ, ಬಳ್ಳಾರಿ, ವಿಜಯನಗರ, ಬಾಗಲಕೋಟೆ, ಬೆಳಗಾವಿ, ಚಿತ್ರದುರ್ಗ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ವ್ಯಾಪ್ತಿಯ ಗ್ರಾಮೀಣ ಭಾಗದಲ್ಲಿ ಅಂದಾಜು 330 ಖರೀದಿ ಕೇಂದ್ರಗಳು ಪ್ರರಂಭಿಸಲಾಗಿದೆ. ರೈತಬಾಂಧವರು ತಮ್ಮ ಹತ್ತಿರದ PACS / FPO / TAPCMS ಗಳಿಗೆ ಭೇಟಿ ನೀಡಿ ನೋಂದಣಿ ಮಾಡಿಕೊಂಡು ಬೆಂಬಲ ಬೆಲೆ ಯೋಜನೆಯ ಹಾಗೂ ರಾಜ್ಯ ಸರ್ಕಾರದ ಪ್ರೋತ್ಸಾಹ ಧನದ ಸುದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ.
ಇದನ್ನೂ ಓದಿ: ಬೆಂಬಲ ಬೆಲೆಯಲ್ಲಿ ಕಡಲೆಕಾಳು ಖರೀದಿ: ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್.ಪಾಟೀಲ್