ಬೆಂಗಳೂರು: ರಾತ್ರಿಯ ಆಕಾಶದಲ್ಲಿ ನಮ್ಮ ಭೂಮಿಗೆ ಹತ್ತಿರದ ಗ್ರಹಗಳನ್ನು ವೀಕ್ಷಿಸುವುದು ಒಂದು ರೋಮಾಂಚನಕಾರಿ ಅನುಭವ. ಅದರಲ್ಲೂ ಒಂದೇ ಸಮಯದಲ್ಲಿ ಅನೇಕ ಗ್ರಹಗಳು ಆಕಾಶದಲ್ಲಿ ಗೋಚರಿಸಿದಾಗ ಅದು ಮತ್ತಷ್ಟು ಖುಷಿ ನೀಡುತ್ತದೆ.
ಈಗ ನಮ್ಮ ಸೌರವ್ಯೂಹದ ನಾಲ್ಕು ಗ್ರಹಗಳಾದ ಶುಕ್ರ, ಶನಿ, ಗುರು ಮತ್ತು ಮಂಗಳ ಗ್ರಹಗಳು ಏಕಕಾಲದಲ್ಲಿ ಸಂಜೆ ಕಾಣಿಸಿಕೊಳ್ಳಲಿದ್ದು, ಇದನ್ನು ಆಕಾಶದಲ್ಲಿ ಬರಿಗಣ್ಣಿನಿಂದ ನೋಡಬಹುದಾಗಿದೆ. ಹೀಗೆ ಗ್ರಹಗಳು ಏಕಕಾಲದಲ್ಲಿ ಒಂದರ ಪಕ್ಕದಲ್ಲಿ ಒಂದು ಕಾಣಿಸಿಕೊಳ್ಳುವುದನ್ನು ಗ್ರಹಗಳ ಮೆರವಣಿಗೆ (planetary parade) ಎಂದು ಕರೆಯಲಾಗುತ್ತದೆ. ಗ್ರಹಗಳ ಈ ಜೋಡಣೆಯನ್ನು ವಿಶ್ವಾದ್ಯಂತ ನೋಡಬಹುದು. ಸೂರ್ಯಾಸ್ತದ ನಂತರ ಸಂಜೆ ಆಕಾಶದಲ್ಲಿ ಈ ಗ್ರಹಗಳು ಒಟ್ಟಿಗೆ ಗೋಚರಿಸುತ್ತವೆ.
ರಾಶಿಚಕ್ರ ವಲಯದಲ್ಲಿ ಒಂದು ಆರ್ಕ್ ಅನ್ನು ರೂಪಿಸುವ ನಾಲ್ಕು ಗ್ರಹಗಳ ಜೋಡಣೆಯು ಪ್ರಸ್ತುತ ಗೋಚರಿಸುತ್ತಿದೆ ಮತ್ತು ಫೆಬ್ರವರಿ ಆರಂಭದವರೆಗೂ ಇದು ಕಾಣಿಸಲಿದೆ ಎಂದು ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (ಐಐಎ) ಹೇಳಿದೆ. ಹೀಗೆ ಗ್ರಹಗಳು ಜೋಡಣೆಯಾಗುವುದು ಅಪರೂಪ ಅಥವಾ ವಿಶೇಷವಲ್ಲದಿದ್ದರೂ, ಇದೊಂದು ಆಕರ್ಷಕ ದೃಶ್ಯವಾಗಿದೆ. ಮುಂಬರುವ ದಿನಗಳಲ್ಲಿ, ಶುಕ್ರ ಗ್ರಹವು ಅದರ ಬೆಳ್ಳಿಯ ಬಣ್ಣದಲ್ಲಿ, ಶನಿ ಹಳದಿ ಬಣ್ಣದಲ್ಲಿ, ಗುರು ಬಿಳಿ ಬಣ್ಣದಲ್ಲಿ ಕಾಣಿಸಿಕೊಳ್ಳುವುದು ಮತ್ತು ಮಂಗಳ ಗ್ರಹವು ಕೆಂಪು ಹೊಳಪಿನಲ್ಲಿ ಏಕಕಾಲದಲ್ಲಿ ಕಾಣಿಸುವುದು ವಿಶಿಷ್ಟವಾಗಿದೆ.
ಪ್ಲಾನೆಟರಿ ಪೆರೇಡ್ ನೋಡುವುದು ಹೇಗೆ?: ಪ್ರಸ್ತುತ, ಸೂರ್ಯಾಸ್ತದ ಸುಮಾರು ಒಂದು ಗಂಟೆಯ ನಂತರ ಆಕಾಶದಲ್ಲಿ ಪಶ್ಚಿಮ ದಿಕ್ಕಿನಲ್ಲಿ ನೋಡಿದರೆ ಗ್ರಹಗಳ ಮೆರವಣಿಗೆ ಕಣ್ತುಂಬಿಕೊಳ್ಳಬಹುದು. ಇದರಲ್ಲಿ ಅತ್ಯಂತ ಪ್ರಕಾಶಮಾನವಾಗಿ ಕಾಣಿಸುವುದು ಶುಕ್ರ ಗ್ರಹ. ಇದು ದಿಗಂತದಿಂದ ಸುಮಾರು 30 ಡಿಗ್ರಿ ಎತ್ತರದಲ್ಲಿದೆ. ಶುಕ್ರನ ನಂತರ ಹಳದಿ ನಕ್ಷತ್ರದಂತೆ ಕಾಣುವುದು ಶನಿ ಗ್ರಹವಾಗಿದೆ. ಇದರ ನಂತರ ಪೂರ್ವ ದಿಕ್ಕಿನಲ್ಲಿ ಗುರು ಗ್ರಹವು ಸ್ವಲ್ಪ ಎತ್ತರದಲ್ಲಿ ಕಾಣಿಸುತ್ತದೆ. ಗುರುಗ್ರಹದ ಪೂರ್ವಕ್ಕೆ ಪ್ರಕಾಶಮಾನವಾದ ಕೆಂಪು ಬಣ್ಣದಲ್ಲಿ ಮಂಗಳ ಗೋಚರಿಸುತ್ತದೆ.
ಮುಂಜಾನೆ, ಸೂರ್ಯೋದಯಕ್ಕೆ ಸ್ವಲ್ಪ ಮೊದಲು, ಪೂರ್ವ ದಿಕ್ಕಿನಲ್ಲಿ ಬುಧ ಉದಯಿಸುವುದನ್ನು ನೀವು ಗಮನಿಸಬಹುದು. ನಂತರ ಮಾರ್ಚ್ ನಲ್ಲಿ, ಬುಧ ಸಂಜೆ ಸಮಯದಲ್ಲಿ ಕಾಣಿಸಲಾರಂಭಿಸುತ್ತಾನೆ. ಪ್ರಸ್ತುತ, ಯುರೇನಸ್ ಮತ್ತು ನೆಪ್ಚೂನ್ ಸಹ ರಾತ್ರಿ ಆಕಾಶದಲ್ಲಿ ಗೋಚರಿಸುತ್ತವೆ. ಆದರೆ ಇವನ್ನು ಬರಿಗಣ್ಣಿನಿಂದ ನೋಡಲು ಸಾಧ್ಯವಿಲ್ಲ. ಇವುಗಳ ವೀಕ್ಷಣೆಗೆ ದೂರದರ್ಶಕದ ಅಗತ್ಯವಿದೆ.
ವಿದ್ಯಮಾನಗಳ ಸೂಕ್ಷ್ಮ ನೋಟ:ನಂಬಿಕೆ ಮತ್ತು ವಾಸ್ತವ: ಸೌರವ್ಯೂಹದ ಎಂಟು ಗ್ರಹಗಳು ಸೂರ್ಯನ ಸುತ್ತ ಸರಿಸುಮಾರು ಒಂದೇ ಸಮತಲದಲ್ಲಿ ಸುತ್ತುತ್ತವೆ. ಭೂಮಿಯಿಂದ, ಅವು ಆಕಾಶದಾದ್ಯಂತ ಕಿರಿದಾದ ಬ್ಯಾಂಡ್ ಒಳಗೆ ಚಲಿಸುತ್ತವೆ ಹಾಗೂ ಇವು ದೈತ್ಯ ಬಳೆಯನ್ನು ಹೋಲುತ್ತವೆ. ಸೂರ್ಯನ ಸುತ್ತ ಈ ಗ್ರಹಗಳ ಕಕ್ಷೆಗಳು ಬಹುತೇಕ ಒಂದೇ ಸಮತಲದಲ್ಲಿವೆ. ಪ್ರತಿಯೊಂದೂ ಆಕಾಶದಲ್ಲಿ ಸೂರ್ಯನ ಸ್ಪಷ್ಟ ಪಥವಾದ ಎಕ್ಲಿಪ್ಟಿಕ್ ನಿಂದ ಕೆಲವೇ ಡಿಗ್ರಿಗಳಷ್ಟು ಮಾತ್ರ ವಾಲುತ್ತದೆ. ಆದ್ದರಿಂದ, ಭೂಮಿಯಿಂದ ನೋಡಿದಂತೆ, ಗ್ರಹಗಳ ಸ್ಥಾನಗಳು ಯಾವಾಗಲೂ ಈ ಸಮತಲದಲ್ಲಿ ಹೊಂದಿಕೆಯಾಗುತ್ತವೆ.
ನಿರುಜ್ ಮೋಹನ್ ರಾಮಾನುಜಂ ಹೇಳುವುದಿಷ್ಟು:ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (ಐಐಎ) ನ ಔಟ್ ರೀಚ್ ವಿಭಾಗದ ಮುಖ್ಯಸ್ಥ ನಿರುಜ್ ಮೋಹನ್ ರಾಮಾನುಜಂ ಅವರು ಈಟಿವಿ ಭಾರತ್ ಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ಗ್ರಹಗಳು ತಮ್ಮ ಕಕ್ಷೆಗಳಲ್ಲಿ ಸೂರ್ಯನ ಸುತ್ತ ಸುತ್ತುವುದರಿಂದ, ಕೆಲವು ಸಂಜೆ ಗೋಚರಿಸುತ್ತವೆ ಮತ್ತು ಇನ್ನು ಕೆಲವು ಬೆಳಗ್ಗೆ ಗೋಚರಿಸುತ್ತವೆ ಎಂದರು. ಸಾಂದರ್ಭಿಕವಾಗಿ, ಅವುಗಳಲ್ಲಿ ಹೆಚ್ಚಿನವು ಭೂಮಿಯಿಂದ ನೋಡುವಂತೆ ಸೂರ್ಯನ ಒಂದು ಬದಿಯಲ್ಲಿ ಕಾಣಿಸಿಕೊಳ್ಳಬಹುದು. ಗ್ರಹಗಳ ಸ್ಥಾನಗಳು ಕಾಲಾನಂತರದಲ್ಲಿ ಬದಲಾಗುತ್ತಲೇ ಇರುತ್ತವೆ. ರಾಮಾನುಜಂ ಅವರ ಪ್ರಕಾರ, ಈ ಪ್ರಸ್ತುತ ಜೋಡಣೆಯು ವಿಶೇಷ ಸಂದರ್ಭವಾಗಿದ್ದರೂ ಇದು ಅಪರೂಪದ ವಿದ್ಯಮಾನವಲ್ಲ.