ನವದೆಹಲಿ:ಪ್ಲಾಸ್ಟಿಕ್ ಮಾಲಿನ್ಯವನ್ನು ವರ್ಷಕ್ಕೆ ಕನಿಷ್ಠ ಶೇ 5ರಷ್ಟು ಕಡಿತಗೊಳಿಸಿದರೂ ಸಾಕು, ಅದರಿಂದ ಸಾಗರಗಳ ಮೇಲ್ಮೈ ಮೇಲಿನ ಮೈಕ್ರೊಪ್ಲಾಸ್ಟಿಕ್ಗಳ ಮಾಲಿನ್ಯವನ್ನು ಗಮನಾರ್ಹ ಪ್ರಮಾಣದಲ್ಲಿ ಕಡಿಮೆ ಮಾಡಬಹುದು ಎಂದು ಅಧ್ಯಯನವೊಂದು ತಿಳಿಸಿದೆ. 5 ಮಿ.ಮೀ.ಗಿಂತ ಕಡಿಮೆ ಉದ್ದದ ಪ್ಲಾಸ್ಟಿಕ್ ಅನ್ನು ಮೈಕ್ರೊಪ್ಲಾಸ್ಟಿಕ್ ಎಂದು ಕರೆಯಲಾಗುತ್ತದೆ.
ಮಾನವ ರಕ್ತನಾಳಗಳು, ವೃಷಣಗಳು, ಸಸ್ಯ ಮತ್ತು ಪ್ರಾಣಿಗಳ ದೇಹದಲ್ಲಿ ಸೇರಿಕೊಳ್ಳುವ ಮೈಕ್ರೋಪ್ಲಾಸ್ಟಿಕ್ಗಳು ವಿಶ್ವಾದ್ಯಂತ ದೊಡ್ಡ ಮಟ್ಟದ ಪರಿಸರಕ್ಕೆ ಮತ್ತು ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುತ್ತಿವೆ. ಸಾಗರಗಳ ಮೇಲೆ ಮೈಕ್ರೊಪ್ಲಾಸ್ಟಿಕ್ಗಳ ಪರಿಣಾಮವನ್ನು ಅರಿತುಕೊಳ್ಳಲು ಇಂಪೀರಿಯಲ್ ಕಾಲೇಜ್ ಆಫ್ ಲಂಡನ್ ಮತ್ತು ಜಿಎನ್ಎಸ್ ಸೈನ್ಸ್ ಸಂಶೋಧಕರು 2026 ರಿಂದ 2100 ರವರೆಗೆ ಪ್ಲಾಸ್ಟಿಕ್ ಮಾಲಿನ್ಯ ಕಡಿತದ ಎಂಟು ವಿಭಿನ್ನ ಸನ್ನಿವೇಶಗಳ ಮಾದರಿಯನ್ನು ಅಭಿವೃದ್ಧಿಪಡಿಸಿದ್ದಾರೆ.
ಎನ್ವಿರಾನ್ಮೆಂಟಲ್ ರಿಸರ್ಚ್ ಲೆಟರ್ಸ್ ಜರ್ನಲ್ನಲ್ಲಿ ಈ ಸಂಶೋಧನಾ ವರದಿಯನ್ನು ಪ್ರಕಟಿಸಲಾಗಿದೆ. ಪ್ರತಿ ವರ್ಷ ಪ್ಲಾಸ್ಟಿಕ್ ಮಾಲಿನ್ಯವನ್ನು ಶೇಕಡಾ 5 ಕ್ಕಿಂತ ಹೆಚ್ಚು ಕಡಿಮೆ ಮಾಡುವುದರಿಂದ ಸಮುದ್ರಗಳಲ್ಲಿನ ಮೈಕ್ರೋಪ್ಲಾಸ್ಟಿಕ್ಗಳ ಮಾಲಿನ್ಯ ಹೆಚ್ಚಳವನ್ನು ಸ್ಥಿರಗೊಳಿಸಬಹುದು ಮತ್ತು ತಡೆಯಬಹುದು ಎಂದು ವರದಿ ಹೇಳಿದೆ.
ಆದಾಗ್ಯೂ ವಾರ್ಷಿಕವಾಗಿ ಶೇಕಡಾ 20 ರಷ್ಟು ಪ್ಲಾಸ್ಟಿಕ್ ಮಾಲಿನ್ಯವನ್ನು ಕಡಿಮೆ ಮಾಡಿದರೂ ಸಮುದ್ರಗಳಲ್ಲಿ ಈಗಿರುವ ಮೈಕ್ರೊಪ್ಲಾಸ್ಟಿಕ್ ಮಟ್ಟವು ಗಮನಾರ್ಹವಾಗಿ ಕಡಿಮೆಯಾಗಲಾರದು. ಅಷ್ಟಾದರೂ ಅವು 2100 ರ ನಂತರವೂ ಸಮುದ್ರದಲ್ಲಿ ಉಳಿಯಲಿವೆ ಎಂದು ಸಂಶೋಧನಾ ಮಾದರಿಗಳಿಂದ ತಿಳಿದು ಬಂದಿದೆ.