ಸಿಯೋಲ್: ಬಿಡುಗಡೆಯಾದ ಮೊದಲ ಮೂರು ವಾರಗಳಲ್ಲಿ ಸ್ಯಾಮ್ ಸಂಗ್ನ ಹೊಸ ಗ್ಯಾಲಕ್ಸಿ ಎಸ್ 24 ಸರಣಿಯ ಸ್ಮಾರ್ಟ್ ಫೋನ್ ಮಾರಾಟ ಸತತವಾಗಿ ಏರಿಕೆ ಕಾಣುತ್ತಿದೆ ಹಾಗೂ ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ಈ ಫೋನ್ಗಳ ಮಾರಾಟ ಎರಡಂಕಿಯ ಬೆಳವಣಿಗೆ ತೋರಿಸಿದೆ ಎಂದು ಉದ್ಯಮದ ಅಂಕಿ - ಅಂಶಗಳು ಸೋಮವಾರ ತಿಳಿಸಿವೆ.
ಮಾರುಕಟ್ಟೆ ಸಂಶೋಧನಾ ಸಂಸ್ಥೆ ಕೌಂಟರ್ ಪಾಯಿಂಟ್ ರಿಸರ್ಚ್ ಅಂಕಿ - ಅಂಶಗಳ ಪ್ರಕಾರ, ಜನವರಿ 28 ಮತ್ತು ಫೆಬ್ರವರಿ 17 ರ ನಡುವೆ ಗ್ಯಾಲಕ್ಸಿ ಎಸ್ 24 ನ ಜಾಗತಿಕ ಮಾರಾಟವು ಹಿಂದಿನ ಗ್ಯಾಲಕ್ಸಿ ಎಸ್ 23 ಸರಣಿಗೆ ಹೋಲಿಸಿದರೆ ಶೇಕಡಾ 8 ರಷ್ಟು ಹೆಚ್ಚಾಗಿದೆ. ವಿಶೇಷವಾಗಿ ಸ್ಯಾಮ್ ಸಂಗ್ನ ಗ್ಯಾಲಕ್ಸಿ ಎಸ್ 24 ಸ್ಮಾರ್ಟ್ ಫೋನ್ ಮಾರಾಟವು ತನ್ನ ದೇಶೀಯ ಮಾರುಕಟ್ಟೆಯಲ್ಲಿ ಅದರ ಹಿಂದಿನದಕ್ಕಿಂತ ಶೇಕಡಾ 22 ರಷ್ಟು ಹೆಚ್ಚಾಗಿದೆ ಎಂದು ಯೋನ್ಹಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಪಶ್ಚಿಮ ಯುರೋಪ್, ಬ್ರಿಟನ್, ಜರ್ಮನಿ ಮತ್ತು ಫ್ರಾನ್ಸ್ ದೇಶಗಳಲ್ಲಿ ಪ್ರೀ ಆರ್ಡರ್ಗಳಿಂದಾಗಿ ಅದರ ಮಾರಾಟವು ಶೇಕಡಾ 28 ರಷ್ಟು ಹೆಚ್ಚಾಗಿದೆ. ಅಮೆರಿಕದಲ್ಲಿ ಕೂಡ ಈ ಫೋನ್ ಮಾರಾಟದಲ್ಲಿ ಶೇಕಡಾ 14 ರಷ್ಟು ಏರಿಕೆ ಕಂಡು ಬಂದಿದೆ.
ಅತ್ಯಂತ ದುಬಾರಿ ಎಸ್ 24 ಅಲ್ಟ್ರಾ ಮಾದರಿಯ ಮಾರಾಟವು ಒಟ್ಟು ಶೇಕಡಾ 52 ರಷ್ಟಿದ್ದರೆ, ಗ್ಯಾಲಕ್ಸಿ ಎಸ್ 24ನ ಮಾರಾಟ ಪ್ರಮಾಣ ಶೇಕಡಾ 27 ಮತ್ತು ಗ್ಯಾಲಕ್ಸಿ ಎಸ್ 24 ಪ್ಲಸ್ ನ ಮಾರಾಟ ಪ್ರಮಾಣ ಶೇಕಡಾ 21ರಷ್ಟಿದೆ.