ಬೆಂಗಳೂರು: ಇಂದು ನಿಗದಿಯಾಗಿದ್ದ ಯುರೋಪಿಯನ್ ಸ್ಪೇಸ್ ಏಜೆನ್ಸಿಯ (ಇಎಸ್ಎ) ಪ್ರೊಬಾ -3 ಮಿಷನ್ ಉಡಾವಣೆಯನ್ನು ನಾಳೆಗೆ (ಡಿಸೆಂಬರ್ 5ಕ್ಕೆ) ಮುಂದೂಡಲಾಗಿದೆ. ನಾಳೆ ಭಾರತೀಯ ಕಾಲಮಾನ 16:12ಕ್ಕೆ ಮಿಷನ್ ಉಡಾವಣೆಯಾಗಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ. ಬಾಹ್ಯಾಕಾಶ ನೌಕೆಯಲ್ಲಿ ತಾಂತ್ರಿಕ ದೋಷ ಪತ್ತೆಯಾಗಿದ್ದರಿಂದ ಮಿಷನ್ ಮುಂದೂಡಲಾಗಿದೆ.
ಉಡಾವಣೆಯ ನೇರಪ್ರಸಾರವನ್ನು ಇಲ್ಲಿ ನೋಡಿ: ನಿಖರವಾದ ಹಾರಾಟದ ಮೂಲಕ ಸೂರ್ಯನ ಕರೋನಾವನ್ನು ಅಧ್ಯಯನ ಮಾಡಲು ವಿನ್ಯಾಸಗೊಳಿಸಲಾದ ನವೀನ ಮಿಷನ್ ಪ್ರೋಬಾ -3 ಭಾರತದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್ಎಲ್ವಿ-ಎಕ್ಸ್ಎಲ್) ಮೂಲಕ ಇಸ್ರೋದ ಪರಿಣಿತ ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ಉಡಾವಣೆಯಾಗಲಿದೆ. ಈ ಮುನ್ನ 11:38 ಸಿಇಟಿ (10:38 ಜಿಎಂಟಿ, 16:08 ಭಾರತೀಯ ಕಾಲಮಾನ)ಕ್ಕೆ ಉಡಾವಣೆ ನಿಗದಿಯಾಗಿತ್ತು. ನಾಳಿನ ಉಡಾವಣೆಯು ಇಸ್ರೋದ ಯೂಟ್ಯೂಬ್ ಚಾನೆಲ್ ಮತ್ತು ಇಎಸ್ಎ ವೆಬ್ ಟಿವಿಯಲ್ಲಿ ನೇರಪ್ರಸಾರವಾಗಲಿದೆ.
ಪ್ರೊಬಾ-3 ಮಿಷನ್ ಉದ್ದೇಶ: ಕೊರೊನೊಗ್ರಾಫ್ ಮತ್ತು ಅಕ್ಯುಲ್ಟರ್ ಬಾಹ್ಯಾಕಾಶ ನೌಕೆಗಳೆರಡರ ನಿಖರ ರಚನೆಯ ಹಾರಾಟವನ್ನು ಪ್ರದರ್ಶಿಸುವುದು ಈ ಬಾಹ್ಯಾಕಾಶ ಕಾರ್ಯಾಚರಣೆಯ ಉದ್ದೇಶವಾಗಿದೆ. ಉಡಾವಣೆಗೊಂಡ ಉಪಗ್ರಹವು ಬಾಹ್ಯಾಕಾಶದಲ್ಲಿ ದೀರ್ಘಕಾಲದವರೆಗೆ ಇರುವಂತೆ ಮಾಡಲು ನಿಖರವಾದ ನಿಯಂತ್ರಣ ತಂತ್ರಗಳು ಮತ್ತು ಅಳತೆಗಳನ್ನು ಬಳಸಲಾಗುತ್ತದೆ.