Premium Bike Sales in India: ಈಗ ಮಾರುಕಟ್ಟೆಯಲ್ಲಿ ಬೈಕ್‌ಗಳ ಕ್ರೇಜ್ ಎಷ್ಟಿದೆ ಎಂದು ಹೇಳಬೇಕಾಗಿಲ್ಲ. ಯುವಕರಿಗೆ ಬೈಕ್‌ನಲ್ಲಿ ಸವಾರಿ ಮಾಡುವುದು ತುಂಬಾ ಖುಷಿ ನೀಡುತ್ತದೆ. ಈ ಪೈಕಿ ಉತ್ತಮ, ಸ್ಟೈಲಿಶ್ ಲುಕ್ ಇರುವ ಪ್ರೀಮಿಯಂ ಬೈಕ್‌ಗಳನ್ನು ಖರೀದಿಸಲು ಯುವಕರು ಆಸಕ್ತಿ ತೋರಿಸುತ್ತಿದ್ದಾರೆ. ಈ ವರ್ಷ ಬೈಕ್‌ಗಳ ಮಾರಾಟದಲ್ಲಿ ದುಬಾರಿ ದ್ವಿಚಕ್ರ ವಾಹನಗಳ ಪಾಲು ಹೆಚ್ಚಾಗುತ್ತಿರುವುದೇ ಇದಕ್ಕೆ ಸಾಕ್ಷಿ. ಈ ಹಿನ್ನೆಲೆ ಗ್ರಾಹಕರ ಆಸಕ್ತಿ ಹಾಗೂ ಅಭಿರುಚಿಗೆ ಅನುಗುಣವಾಗಿ ಎಲ್ಲ ಕಂಪನಿಗಳು ತಮ್ಮ ಹೊಸ ಮಾದರಿಗಳನ್ನು ಕಾಲಕಾಲಕ್ಕೆ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ.
ಎಂಜಿನ್ ಸಾಮರ್ಥ್ಯ: ಮೋಟಾರ್‌ಸೈಕಲ್‌ಗಳು 100 ಸಿಸಿಯಿಂದ 350 ಸಿಸಿ ವರೆಗಿನ ಎಂಜಿನ್ ಸಾಮರ್ಥ್ಯವನ್ನು ಹೊಂದಿವೆ. ಸಾಮಾನ್ಯವಾಗಿ ಜನರು ಮೈಲೇಜ್‌ಗಾಗಿ 100 ಸಿಸಿ ಬೈಕ್‌ಗಳನ್ನು ಖರೀದಿಸಲು ಹೆಚ್ಚು ಆಸಕ್ತಿ ವಹಿಸುತ್ತಾರೆ. 150 ಸಿಸಿ ಮತ್ತು ಅದಕ್ಕಿಂತ ಹೆಚ್ಚಿನ ಎಂಜಿನ್ ಸಾಮರ್ಥ್ಯ ಹೊಂದಿರುವವುಗಳನ್ನು ಪ್ರೀಮಿಯಂ/ಐಷಾರಾಮಿ ಬೈಕ್‌ಗಳೆಂದು ಪರಿಗಣಿಸಲಾಗುತ್ತದೆ. ಕೆಲವು ವರ್ಷಗಳ ಹಿಂದೆ, ವಾಹನ ತಯಾರಕರು ಪ್ರೀಮಿಯಂ ಮೋಟಾರ್‌ಸೈಕಲ್‌ಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರಲಿಲ್ಲ. ಇದಕ್ಕೆ ಕಾರಣ ಆ ಕಾಲದಲ್ಲಿ ಅವುಗಳ ಮಾರಾಟ ಬಹಳ ಕಡಿಮೆ ಇತ್ತು. ಆದರೆ ಇತ್ತೀಚೆಗೆ, ಪ್ರೀಮಿಯಂ ಮೋಟಾರ್‌ಸೈಕಲ್‌ಗಳ ಮಾರಾಟದಲ್ಲಿ ಹೆಚ್ಚಳದೊಂದಿಗೆ, ಕಂಪನಿಗಳು ಈ ವಿಭಾಗದತ್ತ ಗಮನ ಹರಿಸುತ್ತಿವೆ.
ಹೆಚ್ಚುತ್ತಿರುವ ಪ್ರೀಮಿಯಂ ಬೈಕ್‌ಗಳ ಮಾರಾಟ: ದೇಶದಲ್ಲಿ ಮೋಟಾರ್‌ಸೈಕಲ್ ಮಾರಾಟದಲ್ಲಿ ಪ್ರೀಮಿಯಂ ಪಾಲು ಪ್ರಸ್ತುತ 19% ಆಗಿದೆ. 2029ರ ವೇಳೆಗೆ ಶೇ.27-28ಕ್ಕೆ ಏರಿಕೆಯಾಗಲಿದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ. ಮುಂದಿನ 3-5 ವರ್ಷಗಳಲ್ಲಿ ದೇಶದ ಮೋಟಾರ್‌ಸೈಕಲ್ ಮಾರುಕಟ್ಟೆಯು 7-8% ವಾರ್ಷಿಕ ಬೆಳವಣಿಗೆಗೆ ಸಾಕ್ಷಿಯಾಗಲಿದೆ ಎಂದು ಪ್ರಮುಖ ಸಲಹಾ ಕಂಪನಿ ಇಕ್ರಾ ಹೇಳಿದೆ. ಪ್ರೀಮಿಯಂ ಮೋಟಾರ್‌ಸೈಕಲ್ ವಿಭಾಗದಲ್ಲಿ ಎರಡಂಕಿಯ ಬೆಳವಣಿಗೆಯ ಸಾಧ್ಯತೆಯಿದೆ ಎಂದು ಅದು ಹೇಳಿದೆ.
ಹಬ್ಬದ ಋತುವಿನ ಆಶಾವಾದ: ಈಗ ದಸರಾ-ದೀಪಾವಳಿ ಸೀಸನ್ ನಡೆಯುತ್ತಿದೆ. ಮದುವೆ ಮತ್ತು ಇತರ ಶುಭ ಕಾರ್ಯಗಳಿಗೆ ಸೂಕ್ತ ಕ್ಷಣಗಳು ಸಹ ಹತ್ತಿರದಲ್ಲಿವೆ. ಇಂತಹ ಸಮಯದಲ್ಲಿ ಪ್ರೀಮಿಯಂ ಮೋಟಾರ್ ಸೈಕಲ್, ಐಷಾರಾಮಿ ವಾಚ್, ದುಬಾರಿ ಪರ್ಸ್, ಆಭರಣಗಳ ಮಾರಾಟ ಹೆಚ್ಚುತ್ತದೆ. ಇವುಗಳ ಜೊತೆಗೆ ಸ್ಪೋರ್ಟ್ಸ್ ಮತ್ತು ಕ್ರೂಸ್ ಕ್ಲಾಸ್ ಮೋಟಾರ್ ಸೈಕಲ್‌ಗಳ ಮಾರಾಟವೂ ಅಧಿಕವಾಗಲಿದೆ ಎಂದು ಕಂಪನಿಗಳು ನಿರೀಕ್ಷಿಸುತ್ತಿವೆ. ಇಂತಹ ಇನ್ನಷ್ಟು ಮಾದರಿಗಳು ಬಿಡುಗಡೆಯಾಗಲಿವೆ ಎಂದು ವಿತರಕರು ಆಶೀಸುತ್ತಿದ್ದಾರೆ.
ಬದಲಾವಣೆಗೆ ಕಾರಣವೇನು: ಹೆಚ್ಚಿನ ವಾರ್ಷಿಕ ಬೆಳವಣಿಗೆ ಹೊಂದಿರುವ ದೊಡ್ಡ ದೇಶಗಳಲ್ಲಿ ನಮ್ಮ ಭಾರತ ಅಗ್ರಸ್ಥಾನದಲ್ಲಿದೆ. ಇದರಿಂದ ಜನರ ತಲಾ ಆದಾಯ ಹೆಚ್ಚುತ್ತಿದೆ. ಇದರಿಂದಾಗಿ ಕೊಳ್ಳುವ ಶಕ್ತಿ ಹೆಚ್ಚಿದ್ದು, ದುಬಾರಿ, ಗುಣಮಟ್ಟದ, ಹೆಚ್ಚಿನ ದಕ್ಷತೆಯ ಹೊಂದಿರುವ ವಸ್ತುಗಳನ್ನು ಖರೀದಿಸಲು ಜನರು ಆಸಕ್ತಿ ತೋರುತ್ತಾರೆ.