ಹೈದರಾಬಾದ್: "ಭವಿಷ್ಯದ ಮಾನವಸಹಿತ ಬಾಹ್ಯಾಕಾಶ ಯೋಜನೆಗಳಲ್ಲಿ ಗಗನಯಾತ್ರಿಗಳಾಗಲು ಮಹಿಳಾ ವಿಜ್ಞಾನಿಗಳಿಗೂ ಅವಕಾಶವಿದೆ. ಆ ಅವಕಾಶಕ್ಕಾಗಿ 2040ರವರೆಗೆ ಕಾಯಬೇಕೆಂದಿಲ್ಲ. ಇನ್ನು ಕೆಲವೇ ವರ್ಷಗಳಲ್ಲಿ ಆ ಕನಸು ಸಾಕಾರಗೊಳ್ಳಲಿದೆ" ಎಂದು ಇಸ್ರೋ ಅಧ್ಯಕ್ಷ ಡಾ.ಎಸ್.ಸೋಮನಾಥ್ ಹೇಳಿದ್ದಾರೆ.
ಹೈದರಾಬಾದ್‌ನ ಗಚ್ಚಿಬೌಲಿಯ ಒಳಾಂಗಣ ಕ್ರೀಡಾಂಗಣದಲ್ಲಿ ಕಲಾಂ ಇನ್ಸ್ಟಿಟ್ಯೂಟ್ ಆಫ್ ಯೂತ್ ಎಕ್ಸಲೆನ್ಸ್ (ಕೆವೈಇ) ಆಯೋಜಿಸಿದ್ದ 'ಇನ್ಸ್ಪೈರ್-ಹೈದರಾಬಾದ್' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಇದೇ ವೇಳೆ ನಗರದ ಶಾಲಾ, ಕಾಲೇಜುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದು, ವಿದ್ಯಾರ್ಥಿಗಳ ಪ್ರಶ್ನೆಗಳಿಗೂ ಉತ್ತರಿಸಿದರು.
"ಬಾಹ್ಯಾಕಾಶ ಆರ್ಥಿಕತೆಯಲ್ಲಿ ಶೇ.70ರಷ್ಟು ಆದಾಯ ಅಪ್ಲಿಕೇಶನ್ಗಳಿಂದ ಬರುತ್ತದೆ. ಅವುಗಳಲ್ಲಿ ಮೊಬೈಲ್ ಕಮ್ಯುನಿಕೇಶನ್ನಿಂದ ಹಿಡಿದು ರಿಮೋಟ್ ಸೆನ್ಸಿಂಗ್ ಮತ್ತು ಇಮೇಜ್ ಪ್ರೊಸೆಸ್ಸಿಂಗ್ನಂತಹ ಅನೇಕ ಸೇವೆಗಳಿವೆ. ಪ್ರತಿಯೊಬ್ಬ ವ್ಯಕ್ತಿಯೂ ಈಗ ಆಧಾರ್ ಸಂಖ್ಯೆ ಹೊಂದಿದ್ದಾನೆ. ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಐಪಿ ನಂಬರ್ ಹೊಂದುವ ಸಾಧ್ಯತೆ ಇದೆ" ಎಂದು ತಿಳಿಸಿದರು.
"ಒಬ್ಬ ವ್ಯಕ್ತಿ ತಮಿಳಿನಲ್ಲಿ ಮಾತನಾಡುತ್ತಿದ್ದರೆ, ಆ ಮಾತುಗಳನ್ನು ತಕ್ಷಣ ತೆಲುಗು ಭಾಷೆಗೆ ಭಾಷಾಂತರಿಸಿ ಕೇಳುವ ತಂತ್ರಜ್ಞಾನ ಲಭ್ಯವಾಗಲಿದೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ (AI) ಆಗಮನದಿಂದ ಶಿಕ್ಷಣ, ಕೌಶಲ್ಯ ಹಾಗೂ ಕೆಲಸದ ವಿಧಾನಗಳಲ್ಲಿ ಅನೇಕ ಬದಲಾವಣೆಗಳಾಗುವ ಸಾಧ್ಯತೆಯಿದೆ. ಇಲ್ಲಿಯವರೆಗೆ ಅಟೋಮೊಬೈಲ್ಗಳು ಮೆಕ್ಯಾನಿಕಲ್ ಇಂಜಿನಿಯರಿಂಗ್ನಲ್ಲಿ ಬಳಕೆಯಾಗುತ್ತಿದ್ದವು. ಆದರೆ ಈಗ ಪ್ರತr ಕಾರಿನಲ್ಲೂ 30-40 ಚಿಪ್ಗಳ ವ್ಯವಸ್ಥೆ ಮಾಡಿರುವುದರಿಂದ ಎಲೆಕ್ಟ್ರಾನಿಕ್ಸ್ ಪಾತ್ರ ಮಹತ್ವ ಪಡೆಯುತ್ತಿದೆ" ಎಂದು ಮಾಹಿತಿ ಹಂಚಿಕೊಂಡರು.