ನವದೆಹಲಿ: ಕ್ಯಾನ್ಸರ್ಗೆ ಕಾರಣವಾಗುವ ಬಣ್ಣಗಳಿಂದ ಕಲುಷಿತಗೊಂಡಿರುವ ಕೈಗಾರಿಕಾ ತ್ಯಾಜ್ಯ ನೀರನ್ನು ಪರಿಣಾಮಕಾರಿಯಾಗಿ ಸಂಸ್ಕರಿಸುವ ವಿನೂತನ ಪ್ರಕ್ರಿಯೆಯೊಂದನ್ನು ಆವಿಷ್ಕರಿಸಿರುವುದಾಗಿ ರೂರ್ಕೆಲಾದ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಂಶೋಧಕರು ಗುರುವಾರ ಪ್ರಕಟಿಸಿದ್ದಾರೆ.
ಅನುಸಂಧಾನ್ ನ್ಯಾಷನಲ್ ರಿಸರ್ಚ್ ಫೌಂಡೇಶನ್ ಬೆಂಬಲಿತ ಸಂಶೋಧನೆಯು, ನ್ಯಾನೊಕಂಪೊಸಿಟ್ ಆಧಾರಿತ ಸೆರಾಮಿಕ್ ಪೊರೆಗಳನ್ನು ಮೈಕ್ರೋಬಬಲ್ ತಂತ್ರಜ್ಞಾನದೊಂದಿಗೆ ಸಂಯೋಜಿಸುವುದರಿಂದ ನೀರಿನಿಂದ ಬಣ್ಣದ ಅಂಶಗಳನ್ನು ತೆಗೆದುಹಾಕುವ ದಕ್ಷತೆಯನ್ನು ಹೆಚ್ಚಿಸಬಹುದು ಎಂದು ತೋರಿಸಿದೆ.
ಜವಳಿ ಮತ್ತು ಬಣ್ಣ ತಯಾರಿಕೆಯಂತಹ ಕೈಗಾರಿಕೆಗಳಿಂದ ಬರುವ ತ್ಯಾಜ್ಯನೀರು ಸಾಮಾನ್ಯವಾಗಿ ಹಾನಿಕಾರಕ ಬಣ್ಣಗಳನ್ನು ಹೊಂದಿರುತ್ತದೆ. ಇವುಗಳನ್ನು ಸಾಂಪ್ರದಾಯಿಕ ಫಿಲ್ಟರ್ ವಿಧಾನಗಳಿಂದ ತೆಗೆದುಹಾಕುವುದು ಬಹಳ ಕಷ್ಟ. ಬಿಸ್ಮಾರ್ಕ್ ಬ್ರೌನ್ ಆರ್ ನಂತಹ ಬಣ್ಣಗಳು ಮೈಕ್ರೋಫಿಲ್ಟರೇಶನ್ ಪೊರೆಗಳ ಮೂಲಕ ಹಾದುಹೋಗುವಷ್ಟು ಚಿಕ್ಕದಾಗಿರುತ್ತವೆ. ಹೀಗಾಗಿ ಇವನ್ನು ಫಿಲ್ಟರ್ ಮಾಡುವುದು ವಿಶೇಷವಾಗಿ ಸವಾಲಾಗಿದೆ. ಈ ಬಣ್ಣಗಳು ಅವುಗಳ ತೀವ್ರವಾದ ಗಾಢತೆ ಮತ್ತು ಸಂಭಾವ್ಯ ಕ್ಯಾನ್ಸರ್ ಕಾರಕ ಗುಣಲಕ್ಷಣಗಳಿಂದಾಗಿ ಗಮನಾರ್ಹ ಪರಿಸರ ಮತ್ತು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.
ನೇರಳಾತೀತ (ಯುವಿ) ಬೆಳಕನ್ನು ಅವಲಂಬಿಸಿರುವಂಥ ಸಾಂಪ್ರದಾಯಿಕ ಫಿಲ್ಟರ್ ವಿಧಾನಗಳಲ್ಲಿ, ವಿಶೇಷವಾಗಿ ಬಣ್ಣದ ಕಣಗಳನ್ನು ಬೇರ್ಪಡಿಸುವುದು ಕಷ್ಟಕರ. ಈ ಸವಾಲುಗಳನ್ನು ಎದುರಿಸಲು, ವಿಜ್ಞಾನಿಗಳ ತಂಡವು ಎರಡು ಸುಧಾರಿತ ತಂತ್ರಜ್ಞಾನಗಳನ್ನು ಸಂಯೋಜಿಸುವ ಮೂಲಕ ಅತ್ಯಾಧುನಿಕ ಫಿಲ್ಟರ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ.
ಈ ಫಿಲ್ಟರ್ ವ್ಯವಸ್ಥೆಯಲ್ಲಿ ಸಂಯೋಜಿಸಲಾದ ಮೊದಲನೆಯ ತಂತ್ರಜ್ಞಾನ ಹೀಗಿದೆ: ಕೈಗಾರಿಕಾ ತ್ಯಾಜ್ಯದಿಂದ ಪಡೆದ ಝಿಯೋಲೈಟ್ ಮತ್ತು ಜಿಂಕ್ ಆಕ್ಸೈಡ್ ನ್ಯಾನೊಕಾಂಪೊಸೈಟ್ನಿಂದ ಲೇಪಿತ ಸೆರಾಮಿಕ್ ಪೊರೆಯನ್ನು ಬಳಸುವುದು. ಈ ಫೋಟೋಕ್ಯಾಟಲಿಸ್ಟ್ ಬೆಳಕಿಗೆ ಒಡ್ಡಿಕೊಂಡಾಗ ಬಣ್ಣದ ಅಣುಗಳನ್ನು ಒಡೆಯಬಹುದು.