ಭಾರತದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಭಾರಿ ಉತ್ತೇಜನ ನೀಡುವ ನಿಟ್ಟಿನಲ್ಲಿ ಫೆಬ್ರವರಿ 1 ರಂದು ಮಂಡಿಸಲಾದ ಕೇಂದ್ರ ಬಜೆಟ್ನಲ್ಲಿ ಕೇಂದ್ರ ಸರ್ಕಾರ 1 ಲಕ್ಷ ಕೋಟಿ ರೂ. ಅನುದಾನ ಮೀಸಲಿಟ್ಟಿರುವುದು ಗಮನಾರ್ಹವಾಗಿದೆ. ಉದಯೋನ್ಮುಖ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಈ ಅನುದಾನ ಬಳಕೆಯಾಗಲಿದೆ ಹಾಗೂ ಈ ಕ್ಷೇತ್ರದಲ್ಲಿ ಖಾಸಗಿ ವಲಯವನ್ನು ಪ್ರೋತ್ಸಾಹಿಸಲು ಕನಿಷ್ಠ ಅಥವಾ ಶೂನ್ಯ ಬಡ್ಡಿದರಗಳಲ್ಲಿ ಈ ನಿಧಿ ಲಭ್ಯವಾಗಲಿದೆ.
ಇದೊಂದು ಸ್ವಾಗತಾರ್ಹ ಬೆಳವಣಿಗೆಯಾಗಿದ್ದು, ಯೋಜನೆಯನ್ನು ಯಾವ ರೀತಿಯಲ್ಲಿ ಕಾರ್ಯಗತಗೊಳಿಸಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಈ ಹಂತದಲ್ಲಿ ಅನೇಕ ಸಾಧ್ಯತೆಗಳು ಕಾಣಿಸುತ್ತಿದ್ದರು, ಫಲಾನುಭವಿಗಳು ಮತ್ತು ಅನುಷ್ಠಾನದ ಬಗ್ಗೆ ಯಾವುದೇ ನಿರ್ದಿಷ್ಟ ಚರ್ಚೆಗಳು ನಡೆದ ಬಗ್ಗೆ ಮತ್ತು ಈ ಯೋಜನೆಯಲ್ಲಿ ಒಳಗೊಂಡಿರುವ ಸಚಿವಾಲಯಗಳ ಬಗ್ಗೆ ತಿಳಿದಿಲ್ಲ. ಆದಾಗ್ಯೂ ಇದು ಸಾರ್ವಜನಿಕ ಮತ್ತು ಖಾಸಗಿ ವಲಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೂಡಿಕೆಗಳನ್ನು ಹೆಚ್ಚಿಸುವುದರಿಂದ ಇದೊಂದು ತುಂಬಾ ಒಳ್ಳೆಯ ಬೆಳವಣಿಗೆಯಾಗಿದೆ.
ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಒಟ್ಟಾರೆ ಜಿಡಿಪಿಯಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಭಾರತದ ಪಾಲು ತುಂಬಾ ಕಡಿಮೆಯಾಗಿದೆ ಮತ್ತು ಈ ಬಗ್ಗೆ ಗಮನ ಹರಿಸುವಂತೆ ಕೈಗಾರಿಕಾ ಸಂಸ್ಥೆ ನಾಸ್ಕಾಮ್ ದೀರ್ಘಕಾಲದಿಂದ ಒತ್ತಾಯಿಸುತ್ತಿದೆ. ನೀತಿ ಆಯೋಗ ಮತ್ತು ಇನ್ಸ್ಟಿಟ್ಯೂಟ್ ಫಾರ್ ಕಾಂಪಿಟಿಟಿವ್ನೆಸ್ ನಡೆಸಿದ ಅಧ್ಯಯನದ ಪ್ರಕಾರ, ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಭಾರತದ ವೆಚ್ಚವು ವಿಶ್ವದಲ್ಲೇ ಅತ್ಯಂತ ಕಡಿಮೆಯಾಗಿದೆ. ವಾಸ್ತವವಾಗಿ, ಭಾರತದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ವಲಯದಲ್ಲಿನ ಹೂಡಿಕೆಯು 2008-09 ರಲ್ಲಿ ಜಿಡಿಪಿಯ 0.8% ರಿಂದ 2017-18 ರಲ್ಲಿ 0.7% ಕ್ಕೆ ಇಳಿಕೆಯಾಗಿದೆ.
ಭಾರತದ ಜಿಇಆರ್ಡಿ (ಸಂಶೋಧನೆ ಮತ್ತು ಅಭಿವೃದ್ಧಿಯ ಒಟ್ಟು ವೆಚ್ಚ) ಇತರ ಬ್ರಿಕ್ಸ್ ರಾಷ್ಟ್ರಗಳಿಗಿಂತ ಕಡಿಮೆಯಾಗಿದೆ ಎಂದು ಅಂಕಿಅಂಶಗಳು ಹೇಳಿವೆ. ಇದಕ್ಕಾಗಿ ಬ್ರೆಜಿಲ್, ರಷ್ಯಾ, ಚೀನಾ ಮತ್ತು ದಕ್ಷಿಣ ಅಮೆರಿಕ ಕ್ರಮವಾಗಿ 1.2%, 1.1%, 2% ಮತ್ತು 0.8% ಕ್ಕಿಂತ ಹೆಚ್ಚು ಖರ್ಚು ಮಾಡುತ್ತವೆ. ಈ ವಿಷಯದಲ್ಲಿ ವಿಶ್ವದ ಸರಾಸರಿ ವೆಚ್ಚ ಸುಮಾರು 1.8% ರಷ್ಟಿದೆ.
ಭಾರತದ ಜನಸಂಖ್ಯೆಯ ಅರ್ಧದಷ್ಟು ಜನ 25 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು, ಇವರ ಸರಾಸರಿ ವಯಸ್ಸು 28 ವರ್ಷಗಲಾಗಿದೆ. ಅಂದರೆ ದೇಶದಲ್ಲಿನ ಪ್ರತಿಭಾವಂತರ ಸಂಖ್ಯೆ ಅತ್ಯುತ್ತಮವಾಗಿದೆ. ಗ್ಲೋಬಲ್ ಇನ್ನೋವೇಶನ್ ಇಂಡೆಕ್ಸ್ 2019 ರ ಪ್ರಕಾರ, ಹೊಸತನ್ನು ಆವಿಷ್ಕರಿಸುವ ಸಾಮರ್ಥ್ಯ ಮತ್ತು ಯಶಸ್ಸಿನ ವಿಚಾರದಲ್ಲಿ 129 ದೇಶಗಳ ಪೈಕಿ ಭಾರತವು 52 ನೇ ಸ್ಥಾನದಲ್ಲಿದೆ. ಜಾಗತಿಕವಾಗಿ ಐದನೇ ಅತ್ಯಂತ ಸ್ಟಾರ್ಟ್ ಅಪ್ ಸ್ನೇಹಿ ಆರ್ಥಿಕತೆ ಎಂದು ಹೇಳಿಕೊಳ್ಳುವ ಭಾರತಕ್ಕೆ ಈ ಶ್ರೇಯಾಂಕ ಕಳಪೆಯಾಗಿದೆ ಮತ್ತು ಪಕ್ವವಾದ ಗ್ರಾಹಕ ಮಾರುಕಟ್ಟೆಯ ಹೊರತಾಗಿಯೂ ಟೆಕ್ ಆರ್ಥಿಕತೆಯ ನಿಧಾನಗತಿಯ ಬೆಳವಣಿಗೆಯ ದರವನ್ನು ಎತ್ತಿ ತೋರಿಸುತ್ತದೆ. ಸಂಶೋಧನೆ ಮತ್ತು ಅಭಿವೃದ್ಧಿಯ ಮೇಲೆ ಭಾರತದ ತುಲನಾತ್ಮಕವಾಗಿ ಕಡಿಮೆ ವೆಚ್ಚವು ಈ ನಾವೀನ್ಯತೆಯ ಕೊರತೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ.
ಪೇಟಿಎಂ, ಓಲಾ, ಫ್ಲಿಪ್ ಕಾರ್ಟ್, ಜೊಹೋ ಮತ್ತು ಕಾರ್ ದೆಖೋ, ಎಂಎಸ್ ವೈಪ್, ಲೆನ್ಸ್ ಕಾರ್ಟ್ ಮತ್ತು ಇತರ ಭಾರತೀಯ ಯುನಿಕಾರ್ನ್ ಸ್ಟಾರ್ಟ್ ಅಪ್ ಗಳು ಮೂಲದಲ್ಲಿ ಜಾಗತಿಕ ಕಲ್ಪನೆಗಳಾಗಿದ್ದು, ಇವನ್ನೇ ಸ್ಥಳೀಯ ಅಗತ್ಯಗಳನ್ನು ಪೂರೈಸಲು ಅನುಕರಿಸಲಾಗಿದೆ ಎಂಬ ಅಂಶವು ಗುಣಮಟ್ಟದ ಆರ್ &ಡಿ ಕೊರತೆಗೆ ಸಾಕ್ಷಿಯಾಗಿದೆ.
ಕೆಲ ವರ್ಷಗಳ ಹಿಂದೆ ತಮ್ಮ ಭಾರತೀಯ ಸಹವರ್ತಿಗಳಿಗಿಂತ ಮೊದಲೇ ಸ್ಥಾಪಿಸಲಾದ ಯಶಸ್ವಿ ವಿದೇಶಿ ಸ್ಟಾರ್ಟ್ ಅಪ್ ಗಳು ಭಾರತೀಯ ಸ್ಟಾರ್ಟ್ ಅಪ್ ಗಳಿಗೆ ನೀಲನಕ್ಷೆಗಳಾಗಿವೆ. ದೇಶದ 763 ಜಿಲ್ಲೆಗಳಲ್ಲಿ 1,12,718 ಕ್ಕೂ ಹೆಚ್ಚು ಮಾನ್ಯತೆ ಪಡೆದ ಸ್ಟಾರ್ಟ್ ಅಪ್ ಗಳೊಂದಿಗೆ ಭಾರತವು ಜಾಗತಿಕವಾಗಿ ಸ್ಟಾರ್ಟ್ ಅಪ್ ಗಳಿಗೆ 3 ನೇ ಅತಿದೊಡ್ಡ ಪರಿಸರ ವ್ಯವಸ್ಥೆಯಾಗಿ ಸ್ಟಾರ್ಟ್ ಅಪ್ ಕೇಂದ್ರವಾಗಿ ಮಾರ್ಪಟ್ಟಿದೆ ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಮೂಲಸೌಕರ್ಯದಲ್ಲಿನ ಈ ಮಿತಿಗಳು ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ರಂಗದಲ್ಲಿ ಸರ್ಕಾರದ ನಿಷ್ಕ್ರಿಯತೆಯನ್ನು ದಾಟುವುದು ಭಾರತೀಯ ನವೋದ್ಯಮ ಪರಿಸರ ವ್ಯವಸ್ಥೆಗೆ ಸವಾಲಾಗಿದೆ.
ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಅಭಿವೃದ್ಧಿ ಹೊಂದಿದ ದೇಶಗಳಾದ ಯುಎಸ್ಎ, ಸ್ವೀಡನ್ ಮತ್ತು ಸ್ವಿಟ್ಜರ್ಲೆಂಡ್ ಕ್ರಮವಾಗಿ 2.9%, 3.2% ಮತ್ತು 3.4% ಖರ್ಚು ಮಾಡುತ್ತವೆ. ಇಸ್ರೇಲ್ ತನ್ನ ಜಿಡಿಪಿಯ ಸುಮಾರು 4.5% ಅನ್ನು ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಖರ್ಚು ಮಾಡುತ್ತದೆ. ಇದು ವಿಶ್ವದಲ್ಲೇ ಅತಿ ಹೆಚ್ಚು.
ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿನ ಹೂಡಿಕೆಗಳು ಫಲಿತಾಂಶ ನೀಡಲು ತುಂಬಾ ಸಮಯ ತೆಗೆದುಕೊಳ್ಳುತ್ತವೆ ಎಂಬುದು ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳು ಸಂಶೋಧನೆ ಮತ್ತು ಅಭಿವೃದ್ಧಿಗೆ ಕಡಿಮೆ ವೆಚ್ಚ ಮಾಡುವುದಕ್ಕೆ ಮುಖ್ಯ ಕಾರಣವಾಗಿದೆ. ಭಾರತದಂತಹ ದೇಶಗಳು ಹಸಿವು ಸೂಚ್ಯಂಕ, ರೋಗ ನಿಯಂತ್ರಣ ಮತ್ತು ಜೀವನದ ಗುಣಮಟ್ಟವನ್ನು ಹೆಚ್ಚಿಸುವಂತಹ ದೊಡ್ಡ ವಿಷಯಗಳ ಮೇಲೆ ಗಮನ ಹರಿಸುತ್ತವೆ ಮತ್ತು ಅಧಿಕಾರಿಗಳು ಅವುಗಳನ್ನು ನಿಭಾಯಿಸಲು ಸಂಪನ್ಮೂಲಗಳನ್ನು ಬೇರೆಡೆಗೆ ತಿರುಗಿಸುತ್ತಾರೆ. ಆದಾಗ್ಯೂ, ಈ ಕಾಳಜಿಗಳನ್ನು ಅಡಚಣೆಯಾಗಿ ನೋಡದೆ, ಆರ್ &ಡಿ ವ್ಯಾಪ್ತಿಯನ್ನು ವಿಸ್ತರಿಸುವ ಅವಕಾಶವಾಗಿ ನೋಡಬೇಕು ಎಂದು ವಾದಿಸಬಹುದು.