ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದಿನಿಂದ ಎರಡು ದಿನಗಳ ಕುವೈತ್ ಪ್ರವಾಸ ಕೈಗೊಳ್ಳಲಿದ್ದು, ಎರಡು ದೇಶಗಳ ದ್ವಿಪಕ್ಷೀಯ ಸಂಬಂಧ ಕುರಿತು ಮಾತುಕತೆ ನಡೆಸಲಿದ್ದಾರೆ. 43 ವರ್ಷಗಳ ಬಳಿಕ ಗಲ್ಫ್ ರಾಷ್ಟ್ರಕ್ಕೆ ಭಾರತದ ಪ್ರಧಾನಿಯೊಬ್ಬರ ಮೊದಲ ಭೇಟಿ ಇದಾಗಿದೆ.
ಈ ಭೇಟಿಗೆ ಮುನ್ನ ಹೇಳಿಕೆ ನೀಡಿರುವ ಪ್ರಧಾನಿ ಮೋದಿ, ಕುವೈತ್ ರಾಜಕುಮಾರ ಅಮೀರ್ ಆದ ಹೈನೆಸ್ ಶೇಖ್ ಮೆಶಾಲ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾಹ್ ಅವರ ಆಹ್ವಾನದ ಮೇರೆಗೆ ಭೇಟಿ ನೀಡಲಾಗುತ್ತಿದೆ. ಕುವೈತ್ನೊಂದಿಗಿನ ಹಲವು ಪೀಳಿಗೆಯ ಐತಿಹಾಸಿಕ ಸಂಪರ್ಕವನ್ನು ನಾವು ಗೌರವಿಸುತ್ತೇವೆ. ನಾವು ಕೇವಲ ವ್ಯಾಪಾರಿ ಮತ್ತು ಇಂದನ ಸಹಭಾಗಿಗಳಲ್ಲ. ಬದಲಾಗಿ ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಶಾಂತಿ, ಭದ್ರತೆ, ಸ್ಥಿರತೆ ಮತ್ತು ಸಮೃದ್ಧಿಯ ಭಾಗಿಯಾಗಿದ್ದೇವೆ ಎಂದು ತಿಳಿಸಿದ್ದಾರೆ.
ಭವಿಷ್ಯದ ಪಾಲುದಾರಿಕೆ ಮಾರ್ಗ: ತಮ್ಮ ಈ ಭೇಟಿ ಸಂದರ್ಭದಲ್ಲಿ ರಾಜಕುಮಾರ ಶೇಖ್ ಸಹಾಬ್ ಅಲ್ ಖಲೀದ್ ಆಲ್ ಸಹಾಬ್ ಅವರನ್ನು ಪ್ರಧಾನಿ ಭೇಟಿಯಾಗಲಿದ್ದಾರೆ. ಈ ಭೇಟಿ ನಮ್ಮ ಜನರು ಮತ್ತು ಪ್ರದೇಶದ ಪ್ರಯೋಜನಕ್ಕಾಗಿ ಭವಿಷ್ಯದ ಪಾಲುದಾರಿಕೆ ಮಾರ್ಗವಾಗಲಿದೆ ಎಂದಿದ್ದಾರೆ
ಪ್ರವಾಸದ ವೇಳೆ ಕುವೈತ್ನಲ್ಲಿರುವ ಭಾರತದ ರಾಯಭಾರಿಗಳನ್ನು ಭೇಟಿಯಾಗಲು ಉತ್ಸಾಹದಿಂದ ಇರುವುದಾಗಿ ತಿಳಿಸಿರುವ ಪ್ರಧಾನಿ, ಎರಡು ದೇಶಗಳ ನಡುವಿಮ ಸ್ನೇಹ ಸಂಬಂಧವನ್ನು ಬಲಗೊಳಿಸುವಲ್ಲಿ ಅವರ ಕೊಡುಗೆ ಅಪಾರ ಎಂದಿದ್ದಾರೆ.
ಅರೇಬಿಯನ್ ಗಲ್ಫ್ ಕಪ್‌ನ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನ ನೀಡಿದ್ದಕ್ಕೆ ಪ್ರಧಾನಿ ಕುವೈತ್ ನಾಯಕರಿಗೆ ಕೃತಜ್ಞತೆ ತಿಳಿಸಿದ್ದಾರೆ. ಈ ಭೇಟಿಯು ಭಾರತ ಮತ್ತು ಕುವೈತ್ ನಡುವಿನ ಸ್ನೇಹ ಸಂಬಂಧ ಮತ್ತು ವಿಶೇಷ ಬಾಂಧವ್ಯವನ್ನು ಮತ್ತಷ್ಟು ಬಲಗೊಳಿಸುತ್ತದೆ ಎಂಬ ನಂಬಿಕೆ ಇದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಪ್ರವಾಸವೂ ಕುವೈತ್ ಮತ್ತು ಭಾರತದ ಸಂಬಂಧ ವೃದ್ಧಿಯಲ್ಲಿ ಮಹತ್ವದ ಹೆಜ್ಕೆಯಾಗಿದೆ.
ಭಾರತೀಯ ಕಾರ್ಮಿಕರ ಭೇಟಿ: ಪ್ರವಾಸದ ಆರಂಭದಲ್ಲಿ ಕುವೈತ್ನ ಕಾರ್ಮಿಕ ಶಿಬಿರದಲ್ಲಿ ಭಾರತೀಯ ಉದ್ಯೋಗಿಗಳನ್ನು ಪ್ರಧಾನಿ ಭೇಟಿ ಮಾಡಲಿದ್ದಾರೆ. ಈ ವೇಳೆ ಅವರೊಂದಿಗೆ ಸಂವಾದ ನಡೆಸಲಿದ್ದಾರೆ. ಭಾರತದ ಸಂಬಂಧ ವೃದ್ಧಿಯಲ್ಲಿ ವಿದೇಶಿ ನಾಗರಿಕರ ಕೊಡುಗೆಯನ್ನು ಅವರು ತಿಳಿಸಲಿದ್ದಾರೆ.
ಪ್ರಧಾನಿ ಪ್ರವಾಸ ಕುರಿತು ಮಾತನಾಡಿರುವ ವಿದೇಶಾಂಗ ಸಚಿವಾಲಯ, ಈ ಭೇಟಿಯು ಎರಡು ದೇಶಗಳ ನಡುವೆ ಮತ್ತಷ್ಟು ಸಂಬಂಧ ವೃದ್ದಿಗೆ ಅವಕಾಶ ನೀಡುತ್ತದೆ ಎಂದು ತಿಳಿಸಿದೆ. ಈ ಪ್ರವಾಸದಲ್ಲಿ ಪ್ರಧಾನಿ, ವ್ಯಾಪಾರ, ಹೂಡಿಕೆ, ಇಂಧನ ಸಹಕಾರ ಸೇರಿದಂತೆ ಪ್ರಮುಖ ವಿಚಾರ ಕುರಿತು ಮಾತುಕತೆ ನಡೆಸಲಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಜೈಪುರ ಅಗ್ನಿ ಅವಘಡದಲ್ಲಿ 11 ಸಾವು: ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ