ನವದೆಹಲಿ: ಮಿಥೇನ್ ಇಂಧನಕ್ಕೆ ಸಂಬಂಧಿಸಿದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ನಾಸಾ ಬೆಂಬಲಿತ ಖಾಸಗಿ ಕಂಪನಿ ಇಂಟ್ಯೂಟಿವ್ ಮಶೀನ್ಸ್ನ ಮೂನ್ ಲ್ಯಾಂಡರ್ ಉಡಾವಣೆ ವಿಳಂಬವಾಗಿದೆ. ಹ್ಯೂಸ್ಟನ್ ಮೂಲದ ಇಂಟ್ಯೂಟಿವ್ ಕಂಪನಿಯ ಐಎಂ-1 ಲೂನಾರ್ ಲ್ಯಾಂಡರ್ ಫೆಬ್ರವರಿ 14ರಂದು ಫ್ಲೋರಿಡಾದ ಕೇಪ್ ಕೆನವೆರಲ್ ಬಾಹ್ಯಾಕಾಶ ಪಡೆ ನಿಲ್ದಾಣದಿಂದ ಫಾಲ್ಕನ್ 9 ರಾಕೆಟ್ ಮೂಲಕ ಬಾಹ್ಯಾಕಾಶಕ್ಕೆ ಹಾರಬೇಕಿತ್ತು.
ಮಿಥೇನ್ ಲೋಡ್ ಮಾಡುವ ಮುನ್ನ ಆಫ್-ನಾಮಿನಲ್ (off-nominal) ಮಿಥೇನ್ ತಾಪಮಾನದಿಂದಾಗಿ ಉಡಾವಣೆಯನ್ನು ಮುಂದೂಡಲಾಗಿದೆ ಎಂದು ನಾಸಾ ಹೇಳಿಕೆಯಲ್ಲಿ ತಿಳಿಸಿದೆ. ಈಗ ಫೆಬ್ರವರಿ 15ರ ಗುರುವಾರ ಮುಂಜಾನೆ 1.05ಕ್ಕೆ ಮೂನ್ ಲ್ಯಾಂಡರ್ ಉಡಾವಣೆ ಮಾಡಲು ಸ್ಪೇಸ್ ಎಕ್ಸ್ ಮತ್ತು ಇಂಟ್ಯೂಟಿವ್ ಮಶೀನ್ಸ್ ಉದ್ದೇಶಿಸಿವೆ ಎಂದು ಸಂಸ್ಥೆ ತಿಳಿಸಿದೆ.
ಲ್ಯಾಂಡರ್ ಇಂಟ್ಯೂಟಿವ್ ಮಶೀನ್ಸ್ನ ರೊಬೊಟಿಕ್ ನೋವಾ-ಸಿ ಲ್ಯಾಂಡರ್ "ಒಡಿಸ್ಸಿಯಸ್" ಅನ್ನು ಚಂದ್ರನ ಮೇಳೆ ಇಳಿಸುವ ಗುರಿಯನ್ನು ಹೊಂದಿದೆ. ಫೆ.22 ರಂದು ಒಡಿಸ್ಸಿಯಸ್ ಸಾಫ್ಟ್ ಲ್ಯಾಂಡಿಂಗ್ ಆದರೆ, ಹಾಗೆ ಮಾಡಿದ ಪ್ರಥಮ ಖಾಸಗಿ ಬಾಹ್ಯಾಕಾಶ ನೌಕೆ ಎಂಬ ಖ್ಯಾತಿಗೆ ಇದು ಪಾತ್ರವಾಗಲಿದೆ.
"ಮಿಥೇನ್ ಲೋಡ್ ಮಾಡುವ ಮುನ್ನ ಕಾಣಿಸಿಕೊಂಡ ಆಫ್-ನಾಮಿನಲ್ ಮಿಥೇನ್ ತಾಪಮಾನದಿಂದಾಗಿ ಇಂದು ರಾತ್ರಿಯ ಉಡಾವಣಾ ಪ್ರಯತ್ನವನ್ನು ರದ್ದು ಮಾಡಲಾಗಿದೆ" ಎಂದು ಸ್ಪೇಸ್ಎಕ್ಸ್ X.comನಲ್ಲಿ ಅಪ್ಡೇಟ್ ನೀಡಿದೆ.