ಬೆಂಗಳೂರು :ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ವಲಯದಲ್ಲಿನ ಪ್ರತಿಭಾವಂತರ ಕೊರತೆ ನೀಗಿಸಲು ಮೈಕ್ರೋಸಾಫ್ಟ್ ಇಂಡಿಯಾ 20 ಲಕ್ಷಕ್ಕೂ ಹೆಚ್ಚು ಜನರಿಗೆ ಕೃತಕ ಬುದ್ಧಿಮತ್ತೆ ಕೌಶಲಗಳ ತರಬೇತಿ ನೀಡಲಿದೆ ಎಂದು ಮೈಕ್ರೋಸಾಫ್ಟ್ ಅಧ್ಯಕ್ಷ ಮತ್ತು ಸಿಇಒ ಸತ್ಯ ನಾದೆಲ್ಲಾ ಬುಧವಾರ ಪ್ರಕಟಿಸಿದ್ದಾರೆ. ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಾದೆಲ್ಲಾ, ಈ ಹೊಸ ಎಐ ಯುಗದಲ್ಲಿ ಮುಂದುವರಿಯಬೇಕಾದರೆ ಯುವ ಜನತೆ ಎಐ ಬಗ್ಗೆ ಕಲಿತುಕೊಳ್ಳುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು.
"ಈ ವಿಷಯದಲ್ಲಿ ನಮ್ಮ ಜವಾಬ್ದಾರಿ ನಿರ್ವಹಿಸುವುದು ನಮಗೆ ಸಂತೋಷದ ವಿಷಯವೇ ಆಗಿದೆ. ಕೌಶಲ ತರಬೇತಿ ಮಾತ್ರವಲ್ಲದೇ ಎಐ ವಲಯದಲ್ಲಿ ಹೊಸ ಉದ್ಯೋಗಗಳು ಕೂಡ ಸೃಷ್ಟಿಯಾಗಲಿವೆ" ಎಂದು ನಾದೆಲ್ಲಾ ಸಭೆಯಲ್ಲಿ ಹೇಳಿದರು. ಭಾರತವು ಅತ್ಯುತ್ತಮ ಸಾಫ್ಟ್ವೇರ್ ಡೆವಲಪರ್ಗಳನ್ನು ಹೊಂದಿದೆ ಮತ್ತು ಮೈಕ್ರೋಸಾಫ್ಟ್ ಒಡೆತನದ ಡೆವಲಪರ್ ಪ್ಲಾಟ್ಫಾರ್ಮ್ ಗಿಟ್ಹಬ್ನಲ್ಲಿ ಭಾರತೀಯ ಎಐ ಎಂಜಿನಿಯರ್ಗಳು ದೊಡ್ಡ ಸಂಖ್ಯೆಯಲ್ಲಿದ್ದಾರೆ ಎಂದು ಅವರು ತಿಳಿಸಿದರು.
ಗ್ರಾಮೀಣ ಭಾರತದಲ್ಲಿನ ಜನ ಕೂಡ ಈಗ ಎಐ ಆರ್ಥಿಕತೆಯಲ್ಲಿ ಭಾಗವಹಿಸುತ್ತಿದ್ದಾರೆ. ಭಾರತದಂತಹ ದೇಶದಲ್ಲಿ, ಪ್ರಮುಖ ವಿಜ್ಞಾನ-ಚಾಲಿತ ಕೈಗಾರಿಕೆಗಳಿಗೆ ಹೆಚ್ಚಿನ ಬಂಡವಾಳ ಹರಿದು ಬರುತ್ತಿರುವುದು ತುಂಬಾ ರೋಮಾಂಚನಕಾರಿಯಾಗಿದೆ. ವೈಜ್ಞಾನಿಕ ಕ್ರಾಂತಿಯನ್ನು ಮುನ್ನಡೆಸಲು ಭಾರತಕ್ಕೆ ಸಹಾಯ ಮಾಡುವುದು ನಮಗೆ ನಿಜಕ್ಕೂ ಸಂತೋಷವಾಗಿದೆ ಎಂದು ನಾದೆಲ್ಲಾ ಹೇಳಿದರು.