ಫೋನ್ ನಂಬರ್ ಒಂದಿದ್ದರೆ ಸಾಕು, ಯಾವುದೇ ವಾಟ್ಸ್‌ಆ್ಯಪ್ ಬಳಕೆದಾರರಿಗೆ ಯಾರು ಬೇಕಾದರೂ ವಾಟ್ಸ್‌ಆ್ಯಪ್ ಮೆಸೇಜ್ ಕಳುಹಿಸಬಹುದು. ಆದರೆ ಈ ವೈಶಿಷ್ಟ್ಯವನ್ನು ದುರುಪಯೋಗಪಡಿಸಿಕೊಳ್ಳುವ ಕೆಲವರು ಅಪರಿಚಿತರಿಗೆ ಸ್ಪ್ಯಾಮ್ ಮೆಸೇಜು, ಫಿಶಿಂಗ್ ಮೆಸೇಜುಗಳನ್ನು ಕಳುಹಿಸುತ್ತಿರುತ್ತಾರೆ. ಇದು ಮೆಸೇಜು ಪಡೆದವರಿಗೆ ತೀರಾ ಕಿರಿಕಿರಿ ಉಂಟುಮಾಡುತ್ತದೆ. ಅಲ್ಲದೆ ಫಿಶಿಂಗ್ ಮೆಸೇಜುಗಳಲ್ಲಿನ ಲಿಂಕ್ ಕ್ಲಿಕ್ ಮಾಡಿ ಅನೇಕರು ಮೋಸ ಹೋಗುತ್ತಾರೆ.
ಸದ್ಯ ಇದಕ್ಕೆಲ್ಲ ಅಂತ್ಯ ಹಾಡಲು ಸಜ್ಜಾಗಿರುವ ವಾಟ್ಸ್‌ಆ್ಯಪ್ ಹೊಸದೊಂದು ಸುರಕ್ಷತಾ ವೈಶಿಷ್ಟ್ಯವನ್ನು ಪರಿಚಯಿಸಲು ಮುಂದಾಗಿದೆ. ಯಾವುದೇ ಅಪರಿಚಿತ ಸಂಖ್ಯೆಯಿಂದ ಮೆಸೇಜುಗಳು ಬಾರದಂತೆ ಈ ವೈಶಿಷ್ಟ್ಯ ತಡೆಯಲಿದೆ.
ಆಂಡ್ರಾಯ್ಡ್ ವಾಟ್ಸ್ ಆ್ಯಪ್ ಬೀಟಾದ ಇತ್ತೀಚಿನ ಆವೃತ್ತಿಯಲ್ಲಿ (2.24.17.24) ಈ ಹೊಸ ವೈಶಿಷ್ಟ್ಯವನ್ನು ಅಳವಡಿಸಿ ಪರಿಶೀಲಿಸಲಾಗುತ್ತಿದೆ. ಇದು ಬಳಕೆದಾರರಿಗೆ ಅಪರಿಚಿತ ಸಂಖ್ಯೆಗಳಿಂದ ಬರುವ ಸಂದೇಶಗಳನ್ನು ನಿರ್ಬಂಧಿಸಲು ಅನುವು ಮಾಡಿಕೊಡುತ್ತದೆ. ಈ ವೈಶಿಷ್ಟ್ಯವನ್ನು ಬಳಕೆದಾರರು ಸ್ವತಃ ತಾವಾಗಿಯೇ ಸಕ್ರಿಯಗೊಳಿಸಬೇಕಾಗುತ್ತದೆ. ಒಮ್ಮೆ ಸಕ್ರಿಯಗೊಳಿಸಿದ ನಂತರ, ಅಪರಿಚಿತ ಸಂಖ್ಯೆಯಿಂದ ಬರುವ ಸಂದೇಶಗಳು ನಿರ್ದಿಷ್ಟ ಪ್ರಮಾಣವನ್ನು ಮೀರಿದರೆ ವಾಟ್ಸ್ ಆ್ಯಪ್ ಸ್ವಯಂಚಾಲಿತವಾಗಿ ಅವುಗಳನ್ನು ನಿರ್ಬಂಧಿಸುತ್ತದೆ.
ವಾಬೀಟಾ ಇನ್ಫೋ ವೆಬ್ಸೈಟ್ ಮೊದಲ ಬಾರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಈ ವೈಶಿಷ್ಟ್ಯವು ಬಳಕೆದಾರರಿಗೆ ವಾಟ್ಸ್ಆ್ಯಪ್ನಲ್ಲಿ ಸ್ಪ್ಯಾಮ್ ಸಂದೇಶಗಳನ್ನು ಕಡಿಮೆಗೊಳಿಸಲು ಸಹಾಯ ಮಾಡುವುದಲ್ಲದೆ, ಅನಗತ್ಯ ಸಂದೇಶಗಳನ್ನು ಸ್ವಯಂಚಾಲಿತವಾಗಿ ನಿರ್ಬಂಧಿಸುವ ಮೂಲಕ ನಿಮ್ಮ ಸ್ಮಾರ್ಟ್ಫೋನ್ ಕಾರ್ಯಕ್ಷಮತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಅಪರಿಚಿತ ಸಂಖ್ಯೆಯಿಂದ ಆರಂಭದ ಕೆಲ ಸಂದೇಶಗಳು ಆ್ಯಪ್ನಿಂದ ಸ್ವೀಕರಿಸಲ್ಪಡುತ್ತವೆ. ಆದರೆ ಆ ಸಂಖ್ಯೆಯಿಂದ ಒಂದೇ ಸಮನೆ ಸಂದೇಶಗಳು ಬರಲಾರಂಭಿಸಿದರೆ ಅದನ್ನು ಸ್ಪ್ಯಾಮ್ ಎಂದು ಪರಿಗಣಿಸಿ ವಾಟ್ಸ್‌ಆ್ಯಪ್ ಆ ನಂಬರನ್ನು ಸ್ವಯಂಚಾಲಿತವಾಗಿ ಬ್ಲಾಕ್ ಮಾಡುತ್ತದೆ. ವಾಟ್ಸ್‌ಆ್ಯಪ್ ಈಗಾಗಲೇ ಆಡಿಯೋ ಮತ್ತು ವೀಡಿಯೊ ಕರೆಗಳಿಗೆ ಇದೇ ರೀತಿಯ ವೈಶಿಷ್ಟ್ಯವನ್ನು ಹೊಂದಿದೆ. ಅಪರಿಚಿತ ಸಂಖ್ಯೆಯಿಂದ ವಾಟ್ಸ್‌ಆ್ಯಪ್ ಕರೆ ಬಂದಾಗ ಅದು ಸ್ವಯಂಚಾಲಿತವಾಗಿಯೇ ಸೈಲೆನ್ಸ್ ಆಗುತ್ತದೆ.
ವಾಟ್ಸ್‌ಆ್ಯಪ್ ಇದು ಸ್ಮಾರ್ಟ್ಫೋನ್ಗಳಲ್ಲಿ ಉಚಿತವಾಗಿ ಡೌನ್ಲೋಡ್ ಮಾಡಿಕೊಂಡು ಬಳಸಲಾಗುವ ಮೆಸೆಂಜರ್ ಅಪ್ಲಿಕೇಶನ್ ಆಗಿದೆ. ಇಂಟರ್ನೆಟ್ ಮೂಲಕ ವಾಟ್ಸ್ ಆ್ಯಪ್ನಲ್ಲಿ ಸಂದೇಶಗಳು, ಚಿತ್ರಗಳು, ಆಡಿಯೋ ಅಥವಾ ವೀಡಿಯೊವನ್ನು ಕಳುಹಿಸಬಹುದು. ಕಂಪ್ಯೂಟರ್ನ ಡೆಸ್ಕ್ಟಾಪ್ ಬ್ರೌಸರ್ ಮೂಲಕವೂ ವಾಟ್ಸ್ ಆ್ಯಪ್ ಬಳಸಬಹುದು. ವಾಟ್ಸ್‌ಆ್ಯಪ್ ಸದ್ಯ ಭಾರತದ ಅತ್ಯಂತ ಜನಪ್ರಿಯ ಮೆಸೇಜಿಂಗ್ ಪ್ಲಾಟ್ಪಾರ್ಮ್ ಆಗಿದೆ.
ಇದನ್ನೂ ಓದಿ:'2035ಕ್ಕೆ ಬಾಹ್ಯಾಕಾಶ ನಿಲ್ದಾಣ ಸ್ಥಾಪನೆ, 2040ಕ್ಕೆ ಚಂದ್ರನ ಮೇಲೆ ಭಾರತೀಯನ ಪಾದಾರ್ಪಣೆ' - India to set Space Station