ಆಗ್ರಾ(ಉತ್ತರ ಪ್ರದೇಶ): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ-ISRO) ಜೂನ್ 23ರಂದು ಅಂದರೆ ಭಾನುವಾರ ಮರು ಬಳಕೆ ಉಡಾವಣಾ ವಾಹನ ಅಥವಾ ‘ಪುಷ್ಪಕ್’ ನೌಕೆಯ(Reusable Launch Vehicle - RLV) ಲ್ಯಾಂಡಿಂಗ್ ಪ್ರಯೋಗದ(ಎಲ್‌ಇಎಕ್ಸ್)ಅಂತಿಮ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿದೆ. ಈ ಸಾಧನೆಯ ಬಗ್ಗೆ ವಿಶ್ವದಾದ್ಯಂತ ಚರ್ಚೆಯಾಗುತ್ತಿದೆ. ಆದರೆ ‘ಪುಷ್ಪಕ್’ ನೌಕೆ ಯಶಸ್ವಿಯಾಗಿ ಲ್ಯಾಂಡಿಂಗ್ ಆಗುವಲ್ಲಿ ಆಗ್ರಾದ ಕೊಡುಗೆಯೂ ಬಹುಮುಖ ಪಾತ್ರವಹಿಸಿದೆ.
ಹೌದು.. ಆಗ್ರಾದ ಏರಿಯಲ್ ಡೆಲಿವರಿ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್‌ಮೆಂಟ್ (ಎಡಿಆರ್‌ಡಿಇ) ವಿಜ್ಞಾನಿಗಳು 'ಪುಷ್ಪಕ್' ನೌಕೆಯನ್ನು ಯಶಸ್ವಿಯಾಗಿ ಇಳಿಸಿದ ಬ್ರೇಕ್ ಪ್ಯಾರಾಚೂಟ್ ಅನ್ನು ತಯಾರಿಸಿದ್ದಾರೆ. ಈ ಪ್ಯಾರಾಚೂಟ್ ಮೂಲಕ ಇಸ್ರೋ RLV LEX-3 ಮಿಷನ್ ಅನ್ನು ಯಶಸ್ವಿಯಾಗಿ ಪರೀಕ್ಷಿಸಿದೆ.
ನಮ್ಮ ಹೆಮ್ಮೆಯ ಕರ್ನಾಟಕದ ಚಿತ್ರದುರ್ಗದಲ್ಲಿರುವ ಏರೋನಾಟಿಕಲ್ ಟೆಸ್ಟ್ ರೇಂಜ್ (Aeronautical Test Range - ATR)ನಲ್ಲಿ ಭಾನುವಾರ ಬೆಳಗ್ಗೆ 07:10ಕ್ಕೆ 'ಪುಷ್ಪಕ್' ನೌಕೆಯ ಪ್ರಯೋಗ ನಡೆಸಲಾಯಿತು. ಇದು ಲ್ಯಾಂಡಿಂಗ್ ಸಾಮರ್ಥ್ಯವನ್ನು ಪ್ರದರ್ಶಿಸುವ ಎಲ್‌ಇಎಕ್ಸ್-03 ತಂತ್ರಜ್ಞಾನದ ಸರಣಿಯಲ್ಲಿ ಅಂತಿಮ ಹಾಗೂ ಸತತ ಮೂರನೇ ಯಶಸ್ವಿ ಪ್ರಯೋಗವಾಗಿದೆ. ಈ ಯಶಸ್ವಿಗೆ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಅವರು ತಮ್ಮ ತಂಡವನ್ನು ಅಭಿನಂದಿಸಿದ್ದಾರೆ. ಇದರೊಂದಿಗೆ ಆಗ್ರಾದ ಎಡಿಆರ್‌ಡಿಇ ವಿಜ್ಞಾನಿಗಳ ಶ್ರಮವೂ ಪ್ರಶಂಸೆಗೆ ಪಾತ್ರವಾಗಿದೆ.