ಅಗರ್ತಲಾ: ತ್ರಿಪುರಾ ಸರಕಾರದ ಜಲಸಂಪನ್ಮೂಲ ಇಲಾಖೆಯ ಎಂಜಿನಿಯರ್ ಗಳು ರವಿವಾರ ಉನಕೋಟಿ ಜಿಲ್ಲೆಯ ಗಡಿ ಪ್ರದೇಶಗಳಿಗೆ ಭೇಟಿ ನೀಡಿ ಬಾಂಗ್ಲಾದೇಶ ಸರಕಾರವು ತನ್ನ ಭೂಮಿಯಲ್ಲಿ ನಿರ್ಮಿಸುತ್ತಿರುವ ವಿವಾದಾತ್ಮಕ ಡ್ಯಾಮ್ನ ಬಗ್ಗೆ ಅಧ್ಯಯನ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಾಂಗ್ಲಾದೇಶವು ನಿರ್ಮಾಣ ಮಾಡುತ್ತಿರುವ ಈ ಒಡ್ಡಿನಿಂದ ಮಾನ್ಸೂನ್ ಸೀಸನ್ನಲ್ಲಿ ಜಿಲ್ಲಾ ಕೇಂದ್ರ ಕೈಲಾಶಹರ್ ಮತ್ತು ಗಡಿ ಗ್ರಾಮಗಳಲ್ಲಿ ಪ್ರವಾಹದ ಅಪಾಯ ಎದುರಾಗಬಹುದು ಎಂದು ತ್ರಿಪುರಾ ಎಂಜಿನಿಯರ್ಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಇಲಾಖೆಯ ಎಂಜಿನಿಯರ್ಗಳು ಜಿಲ್ಲಾ ಮ್ಯಾಜಿಸ್ಟ್ರೇಟ್ ದಿಲೀಪ್ ಕುಮಾರ್ ಚಕ್ಮಾ ಅವರಿಗೆ ಡ್ಯಾಮ್ ನಿರ್ಮಾಣದ ಬಗ್ಗೆ ವಿವರವಾದ ವರದಿಯನ್ನು ಸಲ್ಲಿಸಲಿದ್ದು, ನಂತರ ಅವರು ರಾಜ್ಯ ಸರ್ಕಾರಕ್ಕೆ ವರದಿ ರವಾನಿಸಲಿದ್ದಾರೆ ಎಂದು ತ್ರಿಪುರಾ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಚಕ್ಮಾ ಅವರು ಇತರ ಹಿರಿಯ ಅಧಿಕಾರಿಗಳೊಂದಿಗೆ ಈಗಾಗಲೇ ಶುಕ್ರವಾರ ಗಡಿ ಪ್ರದೇಶಗಳಿಗೆ ಭೇಟಿ ನೀಡಿದ್ದು, ಸೂಕ್ತ ಕ್ರಮಗಳಿಗಾಗಿ ಈ ವಿಷಯದ ಬಗ್ಗೆ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಬಹುದು ಎಂದು ಅವರು ಹೇಳಿದರು.
ನೆರೆಯ ದೇಶದ ಮೌಲ್ವಿಬಜಾರ್ ಜಿಲ್ಲೆಯ ಶರಿಪುರ್ ಮತ್ತು ದೇವಿಪುರ ಪ್ರದೇಶಗಳಲ್ಲಿ ಬಾಂಗ್ಲಾದೇಶ ಸರ್ಕಾರ ನಿರ್ಮಿಸುತ್ತಿರುವ ವಿವಾದಾತ್ಮಕ ಡ್ಯಾಮ್ನ ಬಗ್ಗೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಈಗಾಗಲೇ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ. ಮೌಲ್ವಿಬಜಾರ್ ಜಿಲ್ಲೆಯು ಉತ್ತರ ತ್ರಿಪುರಾದ ಉನಕೋಟಿ ಜಿಲ್ಲೆಯ ಪಕ್ಕದಲ್ಲಿರುವುದು ಗಮನಾರ್ಹ.
ಅಮಿತ್ ಶಾ ಭೇಟಿ ಮಾಡಿದ ಮಾಣಿಕ್ ಸಹಾ: ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸಹಾ ಅವರು ಶನಿವಾರ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಒಡ್ಡು ನಿರ್ಮಾಣದ ಬಗ್ಗೆ ಪತ್ರವನ್ನು ಹಸ್ತಾಂತರಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಮುಖ್ಯಮಂತ್ರಿಗಳು ಗೃಹ ಸಚಿವರಿಗೆ ಬರೆದ ಪತ್ರದಲ್ಲಿ, ಉನಕೋಟಿ ಜಿಲ್ಲೆಯಲ್ಲಿ ಬಾಂಗ್ಲಾದೇಶವು ನಿರ್ಮಾಣ ಮಾಡುತ್ತಿರುವ ಒಡ್ಡಿನಿಂದಾಗಿ ಸಂಭಾವ್ಯ ಪರಿಣಾಮ ಮತ್ತು ಭಾರತದ ಕಡೆಯಲ್ಲಿ ಎದುರಾಗಬಹುದಾದ ಪ್ರವಾಹದ ಆತಂಕವನ್ನು ಎತ್ತಿ ತೋರಿಸಿದ್ದಾರೆ. ಒಡ್ಡು ನಿರ್ಮಾಣ ತಡೆಗೆ ಬಾಂಗ್ಲಾದೇಶ ಸರ್ಕಾರದೊಂದಿಗೆ ಮಾತುಕತೆ ನಡೆಸುವಂತೆ ಮುಖ್ಯಮಂತ್ರಿಗಳು ಗೃಹ ಸಚಿವರನ್ನು ಒತ್ತಾಯಿಸಿದ್ದಾರೆ" ಎಂದು ಅಧಿಕಾರಿ ತಿಳಿಸಿದ್ದಾರೆ.
ಉಭಯ ದೇಶಗಳನ್ನು ವಿಭಜಿಸುವ ಮನು ನದಿಯ ಉದ್ದಕ್ಕೂ 20 ಅಡಿ ಎತ್ತರ ಮತ್ತು 10 ಅಡಿ ಅಗಲದ ಡ್ಯಾಮ್ ಒಂದನ್ನು ಬಾಂಗ್ಲಾದೇಶ ಸರ್ಕಾರ ನಿರ್ಮಾಣ ಮಾಡುತ್ತಿರುವುದು ಭಾರತಕ್ಕೆ ಆತಂಕ ಮೂಡಿಸಿದೆ. ಬಾಂಗ್ಲಾದೇಶ ಸರ್ಕಾರವು ಭಾರತೀಯ ಅಧಿಕಾರಿಗಳೊಂದಿಗೆ ಯಾವುದೇ ಚರ್ಚೆಯಿಲ್ಲದೆ ತಮ್ಮ ಪ್ರದೇಶಗಳನ್ನು ಪ್ರವಾಹ ನೀರಿನಿಂದ ರಕ್ಷಿಸಲು ಶೂನ್ಯ ರೇಖೆಯ ಉದ್ದಕ್ಕೂ 8 ರಿಂದ 10 ಕಿ.ಮೀ ಉದ್ದದ ಕಾಂಕ್ರೀಟ್ ಒಡ್ಡನ್ನು ನಿರ್ಮಿಸುವ ಕಾರ್ಯಗಳನ್ನು ಕೈಗೊಂಡಿದೆ ಎಂದು ಪ್ರಾಥಮಿಕ ಮಾಹಿತಿಯನ್ನು ಉಲ್ಲೇಖಿಸಿದ ಅಧಿಕಾರಿಯೊಬ್ಬರು ಹೇಳಿದರು. ಬಾಂಗ್ಲಾದೇಶವು ಈಗಾಗಲೇ ಸುಮಾರು 3 ಕಿ.ಮೀ ಒಡ್ಡನ್ನು ನಿರ್ಮಿಸಿದೆ ಮತ್ತು ಉಳಿದ ಭಾಗವನ್ನು ನಿರ್ಮಿಸುವ ಕೆಲಸ ನಡೆಯುತ್ತಿದೆ.
ಇದನ್ನೂ ಓದಿ : ಸೈಫ್ ಅಲಿ ಖಾನ್ ಮೇಲೆ ಚಾಕು ಇರಿತ: ಛತ್ತೀಸ್‌ಗಢದಲ್ಲಿ ಆರೋಪಿ ವಶಕ್ಕೆ! - SAIF CASE SUSPECT DETAINED