India Space Vision 2047: ಭಾರತವು ಶೀಘ್ರದಲ್ಲೇ ಲ್ಯಾಂಡರ್ ತಂತ್ರಜ್ಞಾನವನ್ನು ಕರಗತ ಮಾಡಿಕೊಳ್ಳಲಿದೆ ಮತ್ತು ಭಾರತೀಯ ಬಾಹ್ಯಾಕಾಶ ನಿಲ್ದಾಣವನ್ನು ಚಂದ್ರನ ಮೇಲೆ ಅನ್ವೇಷಣೆಗೆ ಉಡಾವಣಾ ಕೇಂದ್ರವನ್ನಾಗಿ ಮಾಡಲು ಸಿದ್ಧತೆ ನಡೆಯುತ್ತಿವೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಅಧ್ಯಕ್ಷ ಡಾ.ಎಸ್.ಸೋಮನಾಥ್ ಹೇಳಿದ್ದಾರೆ.
ಭಾರತದ ಬಾಹ್ಯಾಕಾಶ ಯೋಜನೆ ಬಗ್ಗೆ ಹೇಳಿದ್ದು ಹೀಗೆ: ನವದೆಹಲಿಯ ರಂಗಭವನದಲ್ಲಿ ಆಲ್ ಇಂಡಿಯಾ ರೇಡಿಯೋ ಆಯೋಜಿಸಿದ್ದ ಪ್ರತಿಷ್ಠಿತ ಸರ್ದಾರ್ ಪಟೇಲ್ ಸ್ಮಾರಕ ಉಪನ್ಯಾಸ 2024 ರಲ್ಲಿ 'ಭಾರತೀಯ ಬಾಹ್ಯಾಕಾಶ ಪ್ರಯಾಣ: ಹೊಸ ಗಡಿಗಳನ್ನು ಅನ್ವೇಷಿಸುವುದು' ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ತಮ್ಮ ಉಪನ್ಯಾಸದಲ್ಲಿ ಖ್ಯಾತ ವಿಜ್ಞಾನಿ ಸೋಮನಾಥ್ ಅವರು ಭಾರತದ ಬಾಹ್ಯಾಕಾಶ ವಿಷನ್ 2047 ಕುರಿತು ಮಾಹಿತಿ ನೀಡಿದರು. ಅವರು ಚಂದ್ರನ ಮೇಲೆ ಇಳಿಯುವ ಭಾರತೀಯ ಮಿಷನ್ ಬಗ್ಗೆ ವಿವರವಾಗಿ ಮಾತನಾಡಿದರು.
ಚಂದ್ರನ ಮೇಲೆ ಉಡಾವಣಾ ಕೇಂದ್ರ ನಿರ್ಮಾಣ: "ಇಸ್ರೋ ಲ್ಯಾಂಡರ್ ತಂತ್ರಜ್ಞಾನದಲ್ಲಿ ಗಮನಾರ್ಹ ಸುಧಾರಣೆಗಳನ್ನು ಮಾಡಿದೆ" ಎಂದ ಡಾ. ಸೋಮನಾಥ್ ಅವರು, ಭಾರತೀಯ ಬಾಹ್ಯಾಕಾಶ ನಿಲ್ದಾಣದ ಪರಿಕಲ್ಪನೆಯನ್ನು ಚಂದ್ರನ ಮೇಲೆ ಅನ್ವೇಷಣೆಗೆ ಉಡಾವಣಾ ಬಿಂದುವಾಗಿ ಪರಿಚಯಿಸಿದರು. ಮರುಬಳಕೆ ಮಾಡಬಹುದಾದ ರಾಕೆಟ್‌ಗಳ ಅಭಿವೃದ್ಧಿ ಮತ್ತು ಭವಿಷ್ಯದ ಅನ್ವೇಷಣೆಯ ಯೋಜನೆಗಳ ಕುರಿತು ಅವರು ವಿವರವಾಗಿ ಮಾತನಾಡಿದರು. ಚಂದ್ರ ಮತ್ತು ಮಂಗಳನ ಕಾರ್ಯಾಚರಣೆಗಳು ಯಶಸ್ವಿಯಾದ ಬಳಿಕ ಇದು ಶುಕ್ರವನ್ನು ಸುತ್ತುವ ಮತ್ತು ಮೇಲ್ಮೈ ಅಧ್ಯಯನ ಮಾಡುವ ಕಾರ್ಯಾಚರಣೆಗಳನ್ನು ಒಳಗೊಂಡಿದೆ ಎಂದು ಹೇಳಿದರು.