Prime Minister Narendra Modi:ಕಳೆದ ದಶಕದಲ್ಲಿ ದಾಖಲೆಯ ಸಂಖ್ಯೆಯ ವಿದೇಶಿ ಉಪಗ್ರಹಗಳನ್ನು ದೇಶದಿಂದ ಉಡಾಯಿಸಲಾಗುತ್ತಿರುವ ಮೂಲಕ ಭಾರತ ವಿಶ್ವದ ಅತ್ಯಂತ ಜನಪ್ರಿಯ ಉಡಾವಣಾ ತಾಣವಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಈ ಐತಿಹಾಸಿಕ ಸಾಧನೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ನಲ್ಲಿ ‘ಬಾಹ್ಯಾಕಾಶ ಕ್ಷೇತ್ರದ ವಿಷಯಕ್ಕೆ ಬಂದಾಗ, ಭಾರತದ ಮೇಲೆ ನಂಬಿಕೆ ಇಡಿ. ಭಾರತವು ಉಪಗ್ರಹ ಉಡಾವಣೆಗಳಿಗೆ ಸೂಕ್ತ ಸ್ಥಳವಾಗಿದೆ ಎಂದು ಬರೆದಿದ್ದಾರೆ.
ಭಾರತದ ಬಾಹ್ಯಾಕಾಶ ಕ್ಷೇತ್ರವು ಅಭೂತಪೂರ್ವ ಬೆಳವಣಿಗೆಯತ್ತ ಸಾಗುತ್ತಿದೆ. ಉಡಾವಣಾ ಕಾರ್ಯಾಚರಣೆಗಳ ಹೆಚ್ಚಳ ಮತ್ತು ಇತ್ತೀಚಿನ 100ನೇ ಉಡಾವಣೆಯೊಂದಿಗೆ ಭಾರತವು ಬಾಹ್ಯಾಕಾಶ ಪರಿಶೋಧನಾ ಕ್ಷೇತ್ರದಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಿದೆ. GSLV F15 NVS-02 ಮಿಷನ್ ಯಶಸ್ವಿ ಉಡಾವಣೆ ದೇಶವನ್ನು ಹೊಸ ದಿಕ್ಕಿನತ್ತ ಕೊಂಡೊಯ್ದಿದೆ. ಇದರೊಂದಿಗೆ, ಭಾರತವು ತನ್ನ ಸ್ಥಳೀಯ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಂಡಿದ್ದು ಮಾತ್ರವಲ್ಲದೇ, ವಿದೇಶಿ ಉಪಗ್ರಹಗಳಿಗೆ ಪ್ರಮುಖ ಉಡಾವಣಾ ವೇದಿಕೆಯಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡಿದೆ.
ಯಶಸ್ವಿ ಉಡಾವಣೆ:ಜನವರಿ 30 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 100 ಉಡಾವಣೆಗಳ ಐತಿಹಾಸಿಕ ಮೈಲಿಗಲ್ಲನ್ನು ಇಸ್ರೋ ಸಾಧಿಸಿರುವುದು ಗೊತ್ತಿರುವ ಸಂಗತಿ. ಬೆಳಗ್ಗೆ 6.23 ಕ್ಕೆ GSLV-F15 ರಾಕೆಟ್ ಉಡಾವಣೆಗೊಂಡು, NVS-02 ನ್ಯಾವಿಗೇಶನ್ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ತು. ಈ ಮೂಲಕ ದೇಶದ ಬಾಹ್ಯಾಕಾಶ ಪರಿಶೋಧನಾ ಸಾಧನೆಗಳಿಗೆ ಮತ್ತೊಂದು ವಿಜಯೋತ್ಸವ ಸೇರಿಸಿತು.
ಮುಂದಿನ ಐದು ವರ್ಷಗಳಲ್ಲಿ ಮತ್ತೊಂದು 100 ಮಿಷನ್ಗಳನ್ನು ಪ್ರಾರಂಭಿಸುವ ಗುರಿ ಇಸ್ರೋ ಹೊಂದಿದೆ ಎಂದು ಪ್ರಧಾನಿ ಮೋದಿ ಗಮನಿಸಿದರು. ಈ ಅದ್ಭುತ ಮೈಲಿಗಲ್ಲು ದೇಶದ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳ ದೃಷ್ಟಿ, ಸಮರ್ಪಣೆ ಮತ್ತು ಬದ್ಧತೆ ವಿವರಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದರು.
ಬಾಹ್ಯಾಕಾಶ ಲೋಕಕ್ಕೆ ಭಾರತ: ಭಾರತವು ಹಲವು ದಶಕಗಳ ಹಿಂದೆಯೇ ಬಾಹ್ಯಾಕಾಶ ಲೋಕಕ್ಕೆ ಪ್ರವೇಶಿಸಿತು. ಆದರೆ, 1979 ರಿಂದ 2014 ರವರೆಗೆ, ಅದು ವಾರ್ಷಿಕವಾಗಿ ಸರಾಸರಿ 1.2 ಉಡಾವಣಾ ಕಾರ್ಯಾಚರಣೆಗಳನ್ನು ಮಾತ್ರ ನಡೆಸಿತು. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಂದ್ರೆ 2014 ಮತ್ತು 2025 ರ ನಡುವೆ ಈ ಅಂಕಿ - ಅಂಶವು ವಾರ್ಷಿಕವಾಗಿ 5.2 ಕಾರ್ಯಾಚರಣೆಗಳಿಗೆ ಏರಿದೆ. ಇದು ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ದೊಡ್ಡ ಎತ್ತರಕ್ಕೆ ಕೊಂಡೊಯ್ದಂತೆ ತೋರಿಸುತ್ತದೆ. ಶ್ರೀಹರಿಕೋಟಾದಿಂದ ಉಡಾವಣೆಯಾದ ಮೊದಲ ದೊಡ್ಡ ರಾಕೆಟ್ ಆಗಸ್ಟ್ 10, 1979 ರಂದು ಸ್ಯಾಟಲೈಟ್ ಲಾಂಚ್ ವೆಹಿಕಲ್ (SLV) ಕಾರ್ಯಾಚರಣೆಯಾಗಿತ್ತು.
ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ನಡೆಯುತ್ತಿರುವ ಈ ಕ್ರಾಂತಿಕಾರಿ ಬದಲಾವಣೆಯೊಂದಿಗೆ ಭಾರತವು ಈಗ ಬಾಹ್ಯಾಕಾಶ ಉಡಾವಣಾ ಪ್ಯಾಡ್‌ಗಳಿಗೆ ಪ್ರಮುಖ ಜಾಗತಿಕ ಕೇಂದ್ರವಾಗಿದೆ. ಬಾಹ್ಯಾಕಾಶ ತಲುಪುವ ಮಾರ್ಗವು ಹೆಚ್ಚು ಪರಿಣಾಮಕಾರಿ ಮತ್ತು ಆರ್ಥಿಕವಾಗಿದೆ. ಈಗ ಉಪಗ್ರಹಗಳನ್ನು ಉಡಾವಣೆ ಮಾಡಲು ಭಾರತವನ್ನು ವಿಶ್ವದಲ್ಲೇ ಪ್ರಮುಖ ಆಯ್ಕೆ ಎಂದು ಪರಿಗಣಿಸಲಾಗುತ್ತಿದೆ. ಭಾರತವು 1979 ರಿಂದ 2014 ರವರೆಗೆ 106 ಉಪಗ್ರಹಗಳನ್ನು ಮಾತ್ರ ಉಡಾವಣೆ ಮಾಡಿದರೆ, ಕೇವಲ 11 ವರ್ಷಗಳಲ್ಲಿ ಅಂದ್ರೆ 2014 ರಿಂದ 2025 ರವರೆಗೆ ಈ ಸಂಖ್ಯೆ 457 ಕ್ಕೆ ಏರಿದೆ.
ಉಪಗ್ರಹ ಉಡಾವಣೆಯಲ್ಲಿ ಭಾರತದ ಪರಿಣತಿಯು ಜಾಗತಿಕವಾಗಿ ವಿಶ್ವಾಸ ಗಳಿಸುತ್ತಿದೆ. ಕೆಲವೇ ವಿದೇಶಿ ಉಪಗ್ರಹಗಳನ್ನು ಉಡಾವಣೆ ಮಾಡುವುದರಿಂದ ಹಿಡಿದು ಪ್ರಮುಖ ಗ್ಲೋಬಲ್ ಪ್ಲೇಯರ್ ಆಗುವವರೆಗೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಏರಿಕೆ ಅಭೂತಪೂರ್ವವಾಗಿದೆ.
ಈಗ, ಬಾಹ್ಯಾಕಾಶ ಯಾನ ರಾಷ್ಟ್ರಗಳಿಗೆ ಭಾರತ ಆದ್ಯತೆಯ ಆಯ್ಕೆಯಾಗಿದೆ. ಭಾರತವು 1979 ರಿಂದ 2014 ರವರೆಗೆ 35 ವಿದೇಶಿ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಆದರೆ, ಮೋದಿ ಆಡಳಿತದಲ್ಲಿ ಅಂದ್ರೆ 2014 ರಿಂದ 2025 ರವರೆಗೆ ಈ ಸಂಖ್ಯೆ 398 ವಿದೇಶಿ ಉಪಗ್ರಹಗಳಿಗೆ ತಲುಪಿದೆ.
ಓದಿ:ಮೆಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ ಪ್ರಭಾವ: ಲಕ್ಷ - ಲಕ್ಷ ಕೋಟಿ ದಾಟಿದ ದೇಶೀಯ ಎಲೆಕ್ಟ್ರಾನಿಕ್ಸ್ ಉತ್ಪಾದನೆ ಮೌಲ್ಯ!