ನವದೆಹಲಿ:2035ರ ವೇಳೆಗೆ ಭಾರತ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣ ಹೊಂದಲಿದೆ. 2040 ರ ವೇಳೆಗೆ ಭಾರತೀಯರು ಚಂದ್ರನ ಮೇಲೆ ಕಾಲಿಡಲಿದ್ದಾರೆ. ಈ ಕುರಿತ ಸಂಶೋಧನೆಗಳು ತ್ವರಿತಗತಿಯಲ್ಲಿ ಸಾಗಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಕಳೆದ ಹತ್ತು ವರ್ಷಗಳಲ್ಲಿ ಭಾರತೀಯ ಬಾಹ್ಯಾಕಾಶ ಕ್ಷೇತ್ರವು ಅತ್ಯಂತ ವೇಗವಾಗಿ ಪ್ರಗತಿ ಸಾಧಿಸಿದೆ. ನಮ್ಮ ದೇಶವು ಯುರೋಪಿಯನ್ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಮೂಲಕ 260 ಮಿಲಿಯನ್ ಯುರೋಗಳನ್ನು ಗಳಿಸಿದೆ ಎಂದು ಹೇಳಿದೆ.
ವಿಜ್ಞಾನ ಮತ್ತು ತಂತ್ರಜ್ಞಾನ, ಬಾಹ್ಯಾಕಾಶ ಸಚಿವಾಲಯವು ಕೈಗೊಂಡಿರುವ ಪ್ರತಿಷ್ಠಿತ ಕಾರ್ಯಕ್ರಮಗಳ ಕುರಿತು ಮಾಹಿತಿ ಹಂಚಿಕೊಂಡ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು, ಬಾಹ್ಯಾಕಾಶ ಕ್ಷೇತ್ರದಲ್ಲಿ ಹಲವು ಮಹತ್ತರ ಸಾಧನೆ ಮಾಡಿರುವ ಭಾರತ ಇದೀಗ, ತನ್ನದೇ ಆದ ಬಾಹ್ಯಾಕಾಶ ನಿಲ್ದಾಣ ನಿರ್ಮಾಣದತ್ತ ದಿಟ್ಟ ಹೆಜ್ಜೆ ಇಟ್ಟಿದೆ. 2035ರ ವೇಳೆಗೆ ಇದು ಸಾಕಾರವಾಗಲಿದೆ ಎಂದು ಹೇಳಿದರು.
ಗಗನ, ಸಮುದ್ರಯಾನದ ತಯಾರಿ:ಭಾರತದ ಮಾನವಸಹಿತ 'ಗಗನಯಾನ ಯೋಜನೆ'ಯ ವಿವರಗಳನ್ನು ಬಹಿರಂಗಪಡಿಸಿದ ಸಚಿವರು, 2025 ರ ಅಂತ್ಯ ಅಥವಾ 2026 ರ ಆರಂಭದಲ್ಲಿ ಮೊದಲ ಭಾರತೀಯ ಗಗನಯಾತ್ರಿ ಬಾಹ್ಯಾಕಾಶಕ್ಕೆ ಹಾರಲಿದ್ದಾರೆ ಎಂದರು.
ಭಾರತದ ಮೊದಲ ಮಾನವಸಹಿತ ಸಾಗರ ಕಾರ್ಯಾಚರಣೆಯಾದ 'ಸಮುದ್ರಯಾನ'ದ ಭಾಗವಾಗಿ ಮತ್ಸ್ಯ - 6000 ಜಲಾಂತರ್ಗಾಮಿ ನೌಕೆ ಅಭಿವೃದ್ಧಿಪಡಿಸಲಾಗುತ್ತಿದೆ. ಈ ನೌಕೆಯಲ್ಲಿ ಮೂವರು ಸಮುದ್ರದಲ್ಲಿ ಗರಿಷ್ಠ 6 ಕಿ.ಮೀ ಆಳದವರೆಗೂ ತಲುಪಬಹುದಾಗಿದೆ. ಇದರಿಂದ ಜಲ ರಹಸ್ಯವನ್ನು ಅಧ್ಯಯನ ಮಾಡಬಹುದು ಎಂದು ಅವರು ಹೇಳಿದರು.