ನವದೆಹಲಿ: ಕಳೆದ 5 ವರ್ಷಗಳಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನೆ ಹಲವಾರು ಹೊಸ ಮಜಲುಗಳಿಗೆ ಏರಿದೆ ಮತ್ತು ದೇಶೀಯ ಕೈಗಾರಿಕೆಗಳ ಗಣನೀಯ ಕೊಡುಗೆಯೊಂದಿಗೆ ವಿಶಿಷ್ಟ ಸಾಧನೆಗಳನ್ನು ಮಾಡಲಾಗಿದೆ ಎಂದು ಗುರುವಾರ ಕೇಂದ್ರ ಸರ್ಕಾರ ಸಂಸತ್ತಿಗೆ ತಿಳಿಸಿದೆ.
ಎಲ್ವಿಎಂ 3 ಮತ್ತು ಪಿಎಸ್ಎಲ್ವಿ ವಾಣಿಜ್ಯ ಉಡಾವಣೆಗಳು, ಎಸ್ಎಸ್ಎಲ್ವಿ ಅಭಿವೃದ್ಧಿ, ಭೂ ವೀಕ್ಷಣಾ ಉಪಗ್ರಹಗಳು, ನ್ಯಾವಿಗೇಷನ್ ಉಪಗ್ರಹ, ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮತ್ತು ರೋವಿಂಗ್, ಸೂರ್ಯನನ್ನು ಅಧ್ಯಯನ ಮಾಡುವ ಮಿಷನ್ (ಆದಿತ್ಯ- ಎಲ್ 1) ಮತ್ತು ಮಾನವ ಬಾಹ್ಯಾಕಾಶ ಹಾರಾಟಗಳು ಕಳೆದ ಐದು ವರ್ಷಗಳ ಪ್ರಮುಖ ಸಾಧನೆಗಳಾಗಿವೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಭಾರತದ ಬಾಹ್ಯಾಕಾಶ ಕಾರ್ಯಕ್ರಮ ಉತ್ತೇಜಿಸುವ ಸಲುವಾಗಿ ಸ್ಟಾರ್ಟ್ ಅಪ್ಗಳನ್ನು ಪ್ರೋತ್ಸಾಹಿಸಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಇದರಿಂದ ಡಿಜಿಟಲ್ ಪ್ಲಾಟ್ ಫಾರ್ಮ್ನಲ್ಲಿ ನೋಂದಾಯಿತ ಸ್ಟಾರ್ಟ್ ಅಪ್ ಗಳ ಒಟ್ಟು ಸಂಖ್ಯೆ 189 ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದ ಅವರು, ಭಾರತೀಯ ಬಾಹ್ಯಾಕಾಶ ನೀತಿ 2023 ಮತ್ತು ಖಾಸಗಿ ವಲಯವನ್ನು ಉತ್ತೇಜಿಸಲು ಇನ್-ಸ್ಪೇಸ್ ಜಾರಿಗೆ ತಂದ ವಿವಿಧ ಯೋಜನೆಗಳನ್ನು ಶ್ಲಾಘಿಸಿದರು.